ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಪೋಪ್ ಲಿಯೋ
ಚಿಕಾಗೋದಲ್ಲಿ ಮೇಲ್-ಇನ್ ಮತಪತ್ರ ಸಲ್ಲಿಕೆ
ಪೋಪ್ ಲಿಯೋ | Photo Credit : AP
ಚಿಕಾಗೋ: ಅಮೆರಿಕದ ಮಧ್ಯಂತರ ಚುನಾವಣೆಗೆ ಮೇಲ್-ಇನ್ ಮತಪತ್ರ ಸಲ್ಲಿಸುವ ಮೂಲಕ ಪೋಪ್ ಲಿಯೋ XIV ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅಲ್ಲದೆ, ಜಾತ್ಯತೀತ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಪೋಪ್ ಕೂಡ ಇವರಾಗಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
'ಅಮೆರಿಕದ ಮೊದಲ ಪೋಪ್ ಲಿಯೋ XIV ಅವರು ಚಿಕಾಗೋದಲ್ಲಿ ಮೇಲ್-ಇನ್ ಮತಪತ್ರ ಸಲ್ಲಿಸಿದ್ದಾರೆ' ಎಂದು ವ್ಯಾಟಿಕನ್ ಶುಕ್ರವಾರ ತಿಳಿಸಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ ಎಂಬ ನಂಬಿಕೆಯನ್ನು ಪೋಪ್ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೋಪ್ ಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಬ್ರಿಟಿಷ್ ಇತಿಹಾಸಕಾರ ಮೈಕೆಲ್ ವಾಲ್ಷ್ ಅವರ ಪ್ರಕಾರ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಪೋಪ್ ಲಿಯೋ XIV ಆಗಿರಬಹುದು. 'ಈ ಹಿಂದೆ ಯಾವುದೇ ಪೋಪ್ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಮತ ಚಲಾಯಿಸಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಅವರು CNNಗೆ ತಿಳಿಸಿದ್ದಾರೆ.
ಅಮೆರಿಕದ ಪೌರತ್ವ ಉಳಿಸಿಕೊಂಡಿರುವ ಪೋಪ್, ಚಿಕಾಗೋ ಉಪನಗರ ನ್ಯೂ ಲೆನಾಕ್ಸ್ ನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರ ಸಹೋದರ ಜಾನ್ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಚಿಕಾಗೋದಲ್ಲಿ ಜನಿಸಿದ ಪೋಪ್, ಇತ್ತೀಚಿನ ವರ್ಷಗಳಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಪ್ರಾಥಮಿಕ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲೂ ಅವರು ಮತ ಚಲಾಯಿಸಿದ್ದರು.
2025ರ ಮೇನಲ್ಲಿ ಪೋಪ್ ಆಗಿ ಆಯ್ಕೆಯಾದ ಬಳಿಕ ಲಿಯೋ XIV ನಾಗರಿಕರು ಸಾರ್ವಜನಿಕ ವಿಷಯಗಳಲ್ಲಿ ಆಸಕ್ತಿ ವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ಬಗ್ಗೆಯೂ ಜನರು ತಮ್ಮ ಧ್ವನಿ ಎತ್ತುವಂತೆಯೂ ಕರೆ ನೀಡಿದ್ದರು.