ಕ್ಯೂಬಾ ಮೇಲಿನ ಅಮೆರಿಕನ್ನರ ನಿರ್ಬಂಧ ತೆರವಿಗೆ ಒತ್ತಾಯಿಸುವ ವಿಶ್ವಸಂಸ್ಥೆ ನಿರ್ಣಯದ ಪರ ಭಾರತ ಮತ ಚಲಾವಣೆ
ಸೌಮ್ಯಾ ನಾಯರ್ | Photo Credit : x
ವಿಶ್ವಸಂಸ್ಥೆ: ಕ್ಯಾರೇಬಿಯನ್ ದೇಶವಾದ ಕ್ಯೂಬಾ ತನ್ನ ಅಭಿವೃದ್ಧಿಯ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ನೆರವಾಗುವಂತೆ, ಅದರ ಮೇಲಿದ್ದ ಆರ್ಥಿಕ, ವಾಣಿಜ್ಯ ಮತ್ತು ಹಣಕಾಸು ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.
193 ಸದಸ್ಯರನ್ನು ಹೊಂದಿರುವ ಸಾಮಾನ್ಯ ಸಭೆಯು ಬುಧವಾರ ಈ ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯದ ಪರವಾಗಿ 130 ದೇಶಗಳು ಮತ ಚಲಾಯಿಸಿದರೆ, 17 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು ಹಾಗೂ 25 ದೇಶಗಳು ಮತದಾನದಿಂದ ದೂರ ಉಳಿದವು.
ಭಾರತದ ಪರವಾಗಿ ಹೇಳಿಕೆ ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಪ್ರತಿನಿಧಿ ಸೌಮ್ಯಾ ನಾಯರ್, ಸಾಮಾನ್ಯ ಸಭೆಯು ನಿರ್ಬಂಧಗಳನ್ನು ಕೊನೆಗೊಳಿಸಲು ಪದೇ ಪದೇ ಕರೆ ನೀಡಿದೆ ಮತ್ತು ಇತರ ರಾಷ್ಟ್ರಗಳ ಸಾರ್ವಭೌಮತ್ವ ಹಾಗೂ ಅಲ್ಲಿನ ಜನರ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ಪ್ರಭಾವ ಬೀರುವ ವಿದೇಶಿ ಪರಿಣಾಮಗಳ ಕಾನೂನು ಹಾಗೂ ನಿಯಮಗಳನ್ನು ತಿರಸ್ಕರಿಸಿದೆ ಎಂದು ಹೇಳಿದರು.