×
Ad

ಅಮೆರಿಕ | ಶಿಶು ವಿಹಾರದಿಂದ ವಾಪಸಾಗುತ್ತಿದ್ದ 5 ವರ್ಷದ ಬಾಲಕನನ್ನು ಬಂಧಿಸಿದ ವಲಸೆ ಅಧಿಕಾರಿಗಳು

Update: 2026-01-23 22:50 IST

Photo Credit : X(@KamalaHarris

ನ್ಯೂಯಾರ್ಕ್, ಜ.23: ಅಮೆರಿಕಾದ ಮಿನ್ನೆಸೋಟದಲ್ಲಿ ಶಿಶುವಿಹಾರದಿಂದ ಮನೆಗೆ ವಾಪಸಾಗುತ್ತಿದ್ದ ಐದು ವರ್ಷದ ಬಾಲಕನನ್ನು ವಲಸೆ ಅಧಿಕಾರಿಗಳು ಬಂಧಿಸಿ, ಆತನನ್ನು ತಂದೆ ಅಡ್ರಿಯಾನ್ ಕೊನೆಜೊ ಜೊತೆಗೆ ಟೆಕ್ಸಾಸ್‌ ನಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಶಾಲಾ ಅಧಿಕಾರಿಗಳು ಮತ್ತು ಕುಟುಂಬದ ವಕೀಲರು ತಿಳಿಸಿದ್ದಾರೆ.

ಬಾಲಕನನ್ನು ಲಿಯಾಮ್ ಕೊನೆಜೊ ರಮೋಸ್ ಎಂದು ಗುರುತಿಸಲಾಗಿದ್ದು, ಇತ್ತೀಚಿನ ವಾರಗಳಲ್ಲಿ ಮಿನ್ನೆಸೋಟ ಹಾಗೂ ಸಮೀಪದ ಪ್ರದೇಶಗಳಲ್ಲಿ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ನಾಲ್ಕನೇ ವಿದ್ಯಾರ್ಥಿಯಾಗಿದ್ದಾನೆ. ಅಧಿಕಾರಿಗಳು ಮನೆಯೊಳಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು, ಮನೆಯ ಬಾಗಿಲು ತಟ್ಟುವಂತೆ ಬಾಲಕನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬಾಗಿಲು ತೆರೆಯಬೇಡ ಎಂದು ಮನೆಯೊಳಗೆ ಇದ್ದ ತನ್ನ ಪತ್ನಿಗೆ ಅಡ್ರಿಯಾನ್ ಕೊನೆಜೊ ತಿಳಿಸಿದ್ದರಿಂದ ಆಕೆ ಬಾಗಿಲು ತೆರೆಯಲಿಲ್ಲ.

ಐದು ವರ್ಷದ ಬಾಲಕನನ್ನು ಬಂಧಿಸಿದ್ದು ಏಕೆ? ಈ ಮಗುವನ್ನೂ ಕ್ರಿಮಿನಲ್ ಎಂದು ಗುರುತಿಸಲಾಗಿದೆಯೇ? ಎಂದು ಕೊಲಂಬಿಯಾ ಹೈಟ್ಸ್ ಪಬ್ಲಿಕ್ ಶಾಲೆಯ ಕರೆಸ್ಪಾಂಡೆಂಟ್ ಝಿನಾ ಸ್ಟೆನ್ವಿಕ್ ಪ್ರಶ್ನಿಸಿದ್ದಾರೆ. ಈ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ವಲಸೆ ಅಧಿಕಾರಿಗಳು ಮಗುವನ್ನು ಬಂಧಿಸಿಲ್ಲ ಎಂದು ಆಂತರಿಕ ಭದ್ರತಾ ಇಲಾಖೆಯ ವಕ್ತಾರೆ ಟ್ರಿಷಿಯಾ ಮೆಕ್‌ಲಾಗ್ಲಿನ್ ಹೇಳಿದ್ದಾರೆ. ವಲಸೆ ಅಧಿಕಾರಿಗಳನ್ನು ಕಂಡೊಡನೆ ಅಡ್ರಿಯಾನ್ ತನ್ನ ಮಗನನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದಾಗ ಅಧಿಕಾರಿಗಳು ಅಡ್ರಿಯಾನ್‌ನ್ನು ಬಂಧಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News