ಅಮೆರಿಕ | ಇಮಿಗ್ರೇಶನ್ ಅಧಿಕಾರಿಗಳಿಂದ ಐದು ವರ್ಷದ ಬಾಲಕ ಬಂಧನ!
PC: x.com/yly_michael
ಟೆಕ್ಸಸ್: ಅಮೆರಿಕದ ಇಮಿಗ್ರೇಶನ್ ಅಧಿಕಾರಿಗಳು ಮಿನ್ನೆಸೋಟಾದ ಪ್ರೀ-ಸ್ಕೂಲ್‌ನಿಂದ ಮನೆಗೆ ವಾಪಸ್ಸಾಗುತ್ತಿದ್ದ ಐದು ವರ್ಷದ ಬಾಲಕನನ್ನು ತಂದೆಯೊಂದಿಗೆ ಬಂಧಿಸಿ ಟೆಕ್ಸಸ್‌ನಲ್ಲಿರುವ ಬಂಧನ ಕೇಂದ್ರಕ್ಕೆ ಕರೆದೊಯ್ದಿರುವ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಈ ಬಾಲಕ ಇತ್ತೀಚಿನ ದಿನಗಳಲ್ಲಿ ಮಿನ್ನಿಯಾಪೊಲೀಸ್ ಉಪನಗರದಲ್ಲಿ ಇಮಿಗ್ರೇಶನ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದ ನಾಲ್ಕನೇ ಬಾಲಕ ಎಂದು ಶಾಲಾ ಅಧಿಕಾರಿಗಳು ಹಾಗೂ ಕುಟುಂಬದ ವಕೀಲರು ತಿಳಿಸಿದ್ದಾರೆ.
ಲಿಯಾಮ್ ಕೊನೆಜೊ ರಮೋಸ್ ಎಂಬ ಬಾಲಕನನ್ನು ಮಂಗಳವಾರ ಸಂಜೆ ಚಲಿಸುತ್ತಿದ್ದ ಕಾರಿನಿಂದ ಫೆಡರಲ್ ಏಜೆಂಟ್‌ಗಳು ವಶಕ್ಕೆ ಪಡೆದರು ಎಂದು ಕೊಲಂಬಿಯಾ ಹೈಟ್ಸ್ ಪಬ್ಲಿಕ್ ಸ್ಕೂಲ್ಸ್ ಅಧೀಕ್ಷಕಿ ಝೆನಾ ಸ್ಟೆನ್ವಿಕ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಐದು ವರ್ಷದ ಬಾಲಕನನ್ನು “ಗಾಳವಾಗಿ” ಬಳಸಿದ ಅಧಿಕಾರಿಗಳು, ಮನೆಯೊಳಗೆ ಬೇರೆ ಯಾರಾದರೂ ವಾಸವಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಮನೆಯ ಬಾಗಿಲು ತಟ್ಟುವಂತೆ ಆ ಬಾಲಕನಿಗೆ ಸೂಚಿಸಿದರು ಎಂದು ಅವರು ಆರೋಪಿಸಿದ್ದಾರೆ.
ಮನೆಯೊಳಗಿದ್ದ ಬಾಲಕನ ತಾಯಿ ಬಾಗಿಲು ತೆಗೆಯಲಿಲ್ಲ ಎಂದು ತಂದೆ ಹೇಳಿದ್ದಾಗಿ ಸ್ಟೆನ್ವಿಕ್ ವಿವರಿಸಿದರು. 2024ರಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದ ಈ ಕುಟುಂಬವು ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ದೇಶವನ್ನು ತ್ಯಜಿಸುವಂತೆ ಯಾವುದೇ ಆದೇಶವನ್ನು ಇನ್ನೂ ಪಡೆಯದ ಸಕ್ರಿಯ ಪ್ರಕರಣವಾಗಿದೆ ಎಂದು ಅವರು ತಿಳಿಸಿದರು.
"ಐದು ವರ್ಷದ ಬಾಲಕನನ್ನು ಏಕೆ ಬಂಧಿಸಬೇಕು? ಈ ಮಗುವನ್ನು ಹಿಂಸಾತ್ಮಕ ಅಪರಾಧಿಯಾಗಿಯೂ ಪರಿಗಣಿಸಲು ಸಾಧ್ಯವಿಲ್ಲ" ಎಂದು ಸ್ಟೆನ್ವಿಕ್ ತೀವ್ರವಾಗಿ ಪ್ರತಿಕ್ರಿಯಿಸಿದರು.
ಆದರೆ, "ಇಮಿಗ್ರೇಶನ್ ಅಧಿಕಾರಿಗಳು ಬಾಲಕನನ್ನು ಗುರಿಯಾಗಿಸಿಕೊಂಡಿಲ್ಲ" ಎಂದು ಆಂತರಿಕ ಭದ್ರತಾ ಇಲಾಖೆಯ ವಕ್ತಾರೆ ಟ್ರಿಸಿಯಾ ಮೆಕ್ಲಾಘ್ಲಿನ್ ಸ್ಪಷ್ಟಪಡಿಸಿದ್ದಾರೆ. ಬಾಲಕನ ತಂದೆ ಈಕ್ವೆಡಾರ್‌ನಿಂದ ಆಗಮಿಸಿ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಅಡ್ರಿಯನ್ ಅಲೆಗ್ಸಾಂಡರ್ ಕೊನೆಜೊ ಅರಿಯಾಸ್ ಆಗಿದ್ದು, ಅವರನ್ನು ಬಂಧಿಸಲಾಗಿದೆ. "ಆ ವೇಳೆ ಮಗುವನ್ನು ಬಿಟ್ಟು ಆತ ಪಲಾಯನ ಮಾಡಲು ಯತ್ನಿಸಿದ್ದ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮಗುವಿನ ಸುರಕ್ಷತೆ ದೃಷ್ಟಿಯಿಂದ ಒಬ್ಬ ಐಸಿಇ ಅಧಿಕಾರಿ ಮಗುವನ್ನು ವಶಕ್ಕೆ ಪಡೆದಿದ್ದು, ಇತರ ಅಧಿಕಾರಿಗಳು ಕೊನೆಜೊ ಅರಿಯಾಸ್‌ನನ್ನು ಬಂಧಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.