ಬ್ರಿಟನ್ | ಹಾಡಹಗಲೇ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ, ಜನಾಂಗೀಯ ನಿಂದನೆ
Photo| X.com
ಲಂಡನ್,ಸೆ.13: ಬ್ರಿಟನ್‌ನ ಓಲ್ಡ್‌ಬರಿಯಲ್ಲಿ 20ರ ಹರೆಯದ ಸಿಖ್ ಯುವತಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಯುವತಿಗೆ ಜನಾಂಗೀಯ ನಿಂದನೆ ಮಾಡಿದ ಆರೋಪಿಗಳು,‘ ನಿನ್ನ ದೇಶಕ್ಕೆ ತೊಲಗು’ ಎಂದು ಬೆದರಿಕೆಯನ್ನೂ ಒಡ್ಡಿದ್ದರು.
ಮಂಗಳವಾರ ಬೆಳಿಗ್ಗೆ 8:30ರ ಸುಮಾರಿಗೆ ಟೇಮ್ ರೋಡ್ ಬಳಿ ನಡೆದ ಈ ಘಟನೆಯನ್ನು ಜನಾಂಗೀಯವಾಗಿ ಉಲ್ಬಣಿಸಿದ ದಾಳಿ ಎಂದು ಪೋಲಿಸರು ಪರಿಗಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರು ಜನಾಂಗೀಯ ನಿಂದನೆ ಮಾಡಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸರು ತಿಳಿಸಿದ್ದಾರೆ. ಶಂಕಿತರನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಳಿಕೋರರು ಶ್ವೇತವರ್ಣೀಯರಾಗಿದ್ದು ಒಬ್ಬಾತ ತಲೆ ಬೋಳಿಸಿಕೊಂಡು ಗಾಢ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರೆ, ಇನ್ನೋರ್ವ ಬೂದು ಬಣ್ಣದ ಟಾಪ್ ಧರಿಸಿದ್ದ ಎಂದು ಸ್ಥಳೀಯ ಮಾಧ್ಯಮಗಳು ಬಣ್ಣಿಸಿವೆ.
ಈ ಹೀನ ಕೃತ್ಯವು ಸಿಖ್ ಸಮುದಾಯದಲ್ಲಿ ಆಕ್ರೋಶವನ್ನು ಸೃಷ್ಟಿಸಿದ್ದು,‘ಈ ಆಕ್ರೋಶವನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ’ಎಂದು ಹೇಳಿರುವ ಪೋಲಿಸರು, ಪ್ರದೇಶದಲ್ಲಿ ಗಸ್ತು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಲವಾಗಿ ಖಂಡಿಸಿರುವ ಬರ್ಮಿಂಗ್‌ಹ್ಯಾಮ್ ಸಂಸದೆ ಪ್ರೀತ್ ಗಿಲ್ ಕೌರ್ ಅವರು, ಬ್ರಿಟನ್‌ನಲ್ಲಿ ‘ಬಹಿರಂಗ ಜನಾಂಗೀಯವಾದ’ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಇದು ತೀವ್ರ ಹಿಂಸಾಚಾರದ ಮತ್ತು ಜನಾಂಗೀಯವಾಗಿ ಉಲ್ಬಣಗೊಂಡ ನಿಂದನೆ ಕೃತ್ಯವಾಗಿದೆ. ಸಂತ್ರಸ್ತ ಮಹಿಳೆ ಈ ದೇಶಕ್ಕೆ ಸೇರಿದವಳು. ಪ್ರತಿಯೊಂದೂ ಸಮುದಾಯಕ್ಕೆ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುಕ್ತರಾಗಿ ಬದುಕುವ ಹಕ್ಕು ಇದೆ. ಓಲ್ಡ್‌ಬರಿ ಅಥವಾ ಬ್ರಿಟನ್‌ನಲ್ಲಿ ಎಲ್ಲಿಯೂ ಜನಾಂಗೀಯತೆ ಮತ್ತು ಸ್ತ್ರೀದ್ವೇಷಕ್ಕೆ ಸ್ಥಾನವಿಲ್ಲ ಎಂದು ಕೌರ್ ಹೇಳಿದರು.
ಘಟನೆಯನ್ನು ‘ನೀಚ, ಜನಾಂಗೀಯ ಮತ್ತು ಸ್ತ್ರೀದ್ವೇಷಿ ದಾಳಿ’ ಎಂದು ಬಣ್ಣಿಸಿದ ಇಲ್ಫೋರ್ಡ್ ಸೌಥ್ ಸಂಸದ ಜಸ್ ಅಥ್ವಾಲ್ ಅವರು,ಯುವತಿಯೋರ್ವಳನ್ನು ಜೀವಮಾನ ಪರ್ಯಂತ ಆಘಾತಕ್ಕೊಳಗಾಗಿಸಿರುವ ಈ ಘಟನೆಯು ದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.
ವಾರಗಳ ಹಿಂದಷ್ಟೇ ವೋಲ್ವರ್‌ಹ್ಯಾಂಪ್ಟನ್ ರೈಲು ನಿಲ್ದಾಣದ ಹೊರಗೆ ಇಬ್ಬರು ಹಿರಿಯ ಸಿಖ್ ವ್ಯಕ್ತಿಗಳ ಮೇಲೆ ಹದಿಹರೆಯದ ಯುವಕರ ಗುಂಪೊಂದು ಕ್ರೂರ ಹಲ್ಲೆ ನಡೆಸಿತ್ತು. ಪಕ್ಕದಲ್ಲಿದ್ದವರು ಮಧ್ಯ ಪ್ರವೇಶಿಸುವವರೆಗೂ ಅವರು ವೃದ್ಧರನ್ನು ಪದೇ ಪದೇ ಒದೆಯುತ್ತಿದ್ದನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ದಾಳಿಯಿಂದ ವೃದ್ಧರು ಧರಿಸಿದ್ದ ಪೇಟಾಗಳು ಕಳಚಿ ಕೆಳಕ್ಕೆ ಬಿದ್ದಿದ್ದವು ಮತ್ತು ಇದು ಸಮುದಾಯದಲ್ಲಿ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತ್ತು.