ಬ್ರಿಟನ್: ಪತ್ನಿ, ಇಬ್ಬರು ಮಕ್ಕಳ ಹತ್ಯೆ ಪ್ರಕರಣ; ಕೇರಳ ಮೂಲದ ಆರೋಪಿಗೆ ಜೀವಾವಧಿ
ಹೊಸದಿಲ್ಲಿ: ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದ ಆರೋಪಿ, ಕೇರಳ ಮೂಲದ ಸಾಜು ಚೆಲಾವೆಲ್ ಗೆ ಬ್ರಿಟನ್ ನ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
52 ವರ್ಷದ ಸಾಜು ಸೋಮವಾರ ನ್ಯಾರ್ಥ್ಆ್ಯಂಪ್ಟನ್ ಕ್ರೌನ್ ಕೋರ್ಟ್ನ ನಲ್ಲಿ ನೀಡಿದ್ದ ಹೇಳಿಕೆಯಲ್ಲಿ ತನ್ನ ಪತ್ನಿ ಅಂಜು ಅಶೋಕ್ (35), ಮಕ್ಕಳಾದ ಜೀವಾ ಸಾಜು (6) ಹಾಗೂ ಜಾನ್ವಿ ಸಾಜು (4) ರನ್ನು ಹತ್ಯೆಗೈದಿರುವುದಾಗಿ ತಪೊಪ್ಪಿಕೊಂಡಿದ್ದನು.
ಆರೋಪಿ ಸಾಜು ಚೆಲಾವೆಲ್ಗೆ ಕನಿಷ್ಠ 40 ವರ್ಷಗಳ ಅವಧಿಯ ಜೀವಾವಧಿ ಶಿಕ್ಷೆಯನ್ನು ಸೋಮವಾರ ಘೋಷಿಸಿದ ನ್ಯಾಯಮೂರ್ತಿ ಎಡ್ವರ್ಡ್ ಪೆಪ್ಪಾರೆಲ್ ಅವರು, ಅಂಜು ಕೊನೆಯುಸಿರೆಳೆಯುವ ಸಮಯದಲ್ಲಿ ನೀಡಿದ್ದ ಹೇಳಿಕೆಯ ಆಡಿಯೋ ರೆಕಾರ್ಡಿಂಗ್ ಅನ್ನು ತೀರ್ಪಿನಲ್ಲಿ ಪ್ರಸ್ತಾವಿಸಿದ್ದರು.
ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ತಾನು ಭಾವಿಸಿದ್ದಾಗಿಯೂ, ಪಾನಮತ್ತನಾಗಿದ್ದ ವೇಳೆ ತಾನು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಆಕೆಯನ್ನು ತಮ್ಮ ಫ್ಲ್ಯಾಟ್ನಲ್ಲಿ ಕೊಲೆ ಮಾಡಿದ್ದಾಗಿ ಆತ ಹೇಳಿದ್ದನು.
2022ರ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ನಾರ್ಥ್ಆ್ಯಂಪ್ಟನ್ನ ಕೆಟ್ಟಿರಿಂಗ್ನಲ್ಲಿರುವ ಸಾಜು ನಿವಾಸದಲ್ಲಿ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಇರಿತದಿಂದ ಗಂಭೀರಗಾಯಗೊಂಡಿರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಬಾಗಿಲು ಒಡೆದು ಒಳಗೆ ನುಗ್ಗಿದ್ದ ಪೊಲೀಸರು ಅಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದ ಸಾಜುವನ್ನು ಬಂಧಿಸಿದ್ದರು.
ಆಂಜು ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಇಬ್ಬರು ಮಕ್ಕಳು ಕೆಲವೇ ತಾಸುಗಳ ಬಳಿಕ ಕೊನೆಯುಸಿರೆಳೆದಿದ್ದರು.