Oman ಕರಾವಳಿಯಲ್ಲಿ ಭಾರತದ ಧ್ವಜ ಹೊಂದಿದ್ದ ಸರಕು ಹಡಗಿನ ಮೇಲೆ ದಾಳಿ: ಭಾರತೀಯ ನಾವಿಕ ಮೃತ್ಯು; 13 ಮಂದಿ ರಕ್ಷಣೆ
Image: MarineTraffic
ಹೊಸದಿಲ್ಲಿ: ಒಮಾನ್ ಕರಾವಳಿಯಲ್ಲಿ ಭಾರತದ ಧ್ವಜ ಹೊಂದಿದ್ದ ಸರಕು ಹಡಗಿನ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ. 14 ಮಂದಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ‘ಅಲ್ ಜುಸುಫಿ’ (Al Jusufi) ಹಡಗಿಗೆ ಅಪರಿಚಿತ ವೈಮಾನಿಕ ವಸ್ತುವೊಂದು ಅಪ್ಪಳಿಸಿದೆ ಎಂದು ಕೇಂದ್ರ ಹಡಗು ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಮಂಗಳವಾರ ತಿಳಿಸಿದ್ದಾರೆ.
ಮೃತ ನಾವಿಕನನ್ನು ಗುಜರಾತ್ ಮೂಲದ ಗಂಧರ್ ನಹೀಮ್ ಅಝೀಝ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೋನೋವಾಲ್, ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
“14 ಮಂದಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಭಾರತದ ಧ್ವಜ ಹೊಂದಿದ್ದ ಎಂಎಸ್‌ವಿ ಅಲ್ ಜುಸುಫಿ ಹಡಗು ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದಾಗ ಗುರುತಿಸಲಾಗದ ವೈಮಾನಿಕ ವಸ್ತುವೊಂದು ಅಪ್ಪಳಿಸಿದೆ. ಹಡಗಿನಲ್ಲಿದ್ದ 13 ಮಂದಿ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದು ಒಮಾನ್ ಕರಾವಳಿ ರಕ್ಷಣಾ ಪಡೆಗಳಿಂದ ರಕ್ಷಿಸಲ್ಪಟ್ಟಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಉಳಿದ 13 ಮಂದಿ ನಾವಿಕರಿಗೆ ತಕ್ಷಣದ ನೆರವು ಒದಗಿಸಲು ಹಾಗೂ ಅವರನ್ನು ಮತ್ತು ಮೃತಪಟ್ಟ ನಾವಿಕನ ಪಾರ್ಥಿವ ಶರೀರವನ್ನು ತ್ವರಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸಚಿವಾಲಯ ಮತ್ತು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಸೋನೋವಾಲ್ ಹೇಳಿದ್ದಾರೆ.