ವೆನೆಝುವೆಲಾ ಸೇನೆಯಿಂದ ಕೊಲಂಬಿಯಾ ಬಂಡುಕೋರರ ಮೇಲೆ ದಾಳಿ: ಕನಿಷ್ಠ 19 ಮೃತ್ಯು
Photo Credit : AP
ಕಾರಕಾಸ್, ನ. 2: ವೆನೆಝುವೆಲಾ ಗಡಿಯೊಳಗಿದ್ದ ಕೊಲಂಬಿಯಾದ ಬಂಡುಕೋರ ಪಡೆಯ ಕ್ಯಾಂಪ್ ಮೇಲೆ ವೆನೆಝುವೆಲಾ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ನಿಕಟ ಮೂಲಗಳು ರವಿವಾರ ತಿಳಿಸಿವೆ.
ಪಶ್ಚಿಮ ರಾಜ್ಯವಾದ ಅಪ್ಯೂರೆಯ ನೈರುತ್ಯ ಭಾಗದ ಅರಣ್ಯ ಪ್ರದೇಶದಲ್ಲಿದ್ದ ಕ್ಯಾಂಪ್ ಅನ್ನು ಗುರಿಯಾಗಿಸಿಕೊಂಡು ಡ್ರೋನ್ಗಳು ಮತ್ತು ದಾಳಿ ಹೆಲಿಕಾಪ್ಟರ್ ಗಳ ಮೂಲಕ ಈ ದಾಳಿಗಳನ್ನು ನಡೆಸಲಾಯಿತು. ‘ನ್ಯಾಷನಲ್ ಲಿಬರೇಶನ್ ಆರ್ಮಿ’ (ELN) ಎಂಬ ಕೊಲಂಬಿಯಾದ ಬಂಡುಕೋರ ಗುಂಪಿನ ಕ್ಯಾಂಪ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಈ ದಾಳಿಗೆ ಅಮೆರಿಕದ ಗುಪ್ತಚರ ಸಂಸ್ಥೆಗಳ ಬೆಂಬಲವಿತ್ತು. ಇದು ಅಮೆರಿಕದಿಂದ ಬಂದ ಆದೇಶವಾಗಿತ್ತು ಎಂದು ವೆನೆಝುವೆಲಾದ ಮಿಲಿಟರಿ ಮೂಲಗಳು ತಿಳಿಸಿವೆ.
ವೆನೆಝುವೆಲಾ ಮತ್ತು ಕೊಲಂಬಿಯಾ ನಡುವಿನ 2,200 ಕಿಲೋಮೀಟರ್ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ELN ಬಂಡುಕೋರ ಗುಂಪು ಹಾಗೂ ಹಲವು ಸಶಸ್ತ್ರ ಗುಂಪುಗಳು ಡ್ರಗ್ಸ್ ಅಕ್ರಮ ಸಾಗಣೆ, ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿವೆ.