ಚೀನಾ ನಮ್ಮ ಮಿತ್ರನಲ್ಲ, ನಮಗಿರುವ ಅತೀ ದೊಡ್ಡ ಬೆದರಿಕೆ: ಅಮೆರಿಕ ಸಚಿವೆ ಗಿನಾ
ಗಿನಾ ರೇಮಂಡೊ | Photo: PTI
ವಾಷಿಂಗ್ಟನ್: ಚೀನಾ ನಮ್ಮ ಮಿತ್ರನಲ್ಲ. ನಮಗೆ ಎದುರಾಗಿರುವ ಅತೀ ದೊಡ್ಡ ಬೆದರಿಕೆ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೇಮಂಡೊ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದ ಸಿಮಿವ್ಯಾಲಿಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ವೇದಿಕೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿರುವ ಸೆಮಿಕಂಡಕ್ಟರ್‌ಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಚೀನಾ ಪಡೆಯುವುದನ್ನು ತಡೆಯುವಂತೆ ಸಂಸದರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಅಮೆರಿಕದ ಮಿತ್ರರನ್ನು ಒತ್ತಾಯಿಸಿದರು.
ಈ ಸಭೆಯಲ್ಲಿ ಹಾಜರಿರುವ ಕಂಪ್ಯೂಟರ್ ಚಿಪ್ ಉತ್ಪಾದಿಸುವ ಸಂಸ್ಥೆಗಳ ಸಿಇಒಗಳಿಗೆ ನನ್ನ ಆಗ್ರಹ ಇಷ್ಟವಾಗದು ಎಂಬುದು ತಿಳಿದಿದೆ. ಆದರೆ ನಮಗೆ ಆದಾಯಕ್ಕಿಂತಲೂ ರಾಷ್ಟ್ರೀಯ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆಯ ರಕ್ಷಣೆ ಮುಖ್ಯ ಎಂಬುದನ್ನು ಮರೆಯಬಾರದು. ನಿಮ್ಮ ವ್ಯವಹಾರಗಳಿಗೆ ಪ್ರಜಾಪ್ರಭುತ್ವ ಒಳ್ಳೆಯದು, ಇಲ್ಲಿ ಹಾಗೂ ಪ್ರಪಂಚದಾದ್ಯಂತ ಎಲ್ಲರಿಗೂ ಸಮಾನವಾದ ಕಾನೂನು ಇರುವುದು ನಿಮ್ಮ ವ್ಯವಹಾರಕ್ಕೆ ಒಳ್ಳೆಯದು’ ಎಂದು ಗಿನಾ ಪ್ರತಿಪಾದಿಸಿದ್ದಾರೆ.
‘ನಮ್ಮ ರಫ್ತು ನಿಯಂತ್ರಣವನ್ನು ಹೇಗೆ ಅಂತ್ಯಗೊಳಿಸಬೇಕು ಎಂದು ಲೆಕ್ಕಾಚಾರ ಮಾಡಲು ಪ್ರತೀ ದಿನ, ಪ್ರತೀ ಕ್ಷಣ ಚೀನಾ ಪ್ರಯತ್ನಿಸುತ್ತಿದೆ. ನಾವು ಆ ನಿಯಂತ್ರಣವನ್ನು ಬಿಗಿಗೊಳಿಸಬೇಕು ಮತ್ತು ನಮ್ಮ ಮಿತ್ರರೂ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಗಂಭೀರ ಪ್ರಯತ್ನ ನಡೆಸಬೇಕಾಗಿದೆ’ ಎಂದ ಅವರು, ವಾಣಿಜ್ಯ ಇಲಾಖೆಗೆ ಇನ್ನಷ್ಟು ಬಜೆಟ್ ಅನುದಾನ ದೊರೆಯಬೇಕೆಂದು ಆಗ್ರಹಿಸಿದರು. ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದಲ್ಲಿ ಅಮೆರಿಕ ವಿಶ್ವದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಅತ್ಯುನ್ನತ ಸೆಮಿಕಂಡಕ್ಟರ್ ವಿನ್ಯಾಸದಲ್ಲೂ ಅಮೆರಿಕ ಅಗ್ರಗಣ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಖಾಸಗಿ ಕ್ಷೇತ್ರ. ನಮಗೆ ಸಮಾನವಾಗಿ ನಿಲ್ಲಲು ಚೀನಾಕ್ಕೆ ಅವಕಾಶ ನೀಡುವ ಮಾತೇ ಇಲ್ಲ ಎಂದು ಗಿನಾ ಹೇಳಿದರು.