×
Ad

ಚೀನಾ ನೇತೃತ್ವದಲ್ಲಿ ಹಿಮಾಲಯನ್ ವೇದಿಕೆ ಸಮ್ಮೇಳನ, ಅರುಣಾಚಲ ಗಡಿ ಬಳಿ ಸಭೆ

Update: 2023-10-03 22:21 IST

ಭಾರತ, ಚೀನಾ | Photo: PTI 

ಬೀಜಿಂಗ್ : ಭಾರತದ ಅರುಣಾಚಲ ಪ್ರದೇಶದ ಗಡಿ ಬಳಿ 3ನೇ ಟ್ರಾನ್ಸ್-ಹಿಮಾಲಯನ್ ಫೋರಂ ಫಾರ್ ಇಂಟರ್ ನ್ಯಾಷನಲ್ ಕೋ-ಆಪರೇಷನ್‍ನ (ಅಂತರಾಷ್ಟ್ರೀಯ ಸಹಕಾರಕ್ಕಾಗಿ 3ನೇ ಹಿಮಾಲಯನ್ ಪ್ರಾಂತ ವೇದಿಕೆ) ಸಮ್ಮೇಳನವನ್ನು ಅಕ್ಟೋಬರ್ 4 ಮತ್ತು 5ರಂದು ಆಯೋಜಿಸಿರುವುದಾಗಿ ಚೀನಾ ಘೋಷಿಸಿದೆ.

ಸಮ್ಮೇಳನದಲ್ಲಿ ತನ್ನ ನಿಕಟ ಮಿತ್ರದೇಶ ಪಾಕಿಸ್ತಾನ, ಮಂಗೋಲಿಯಾ ಮತ್ತು ಅಫ್ಘಾನಿಸ್ತಾನದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಹಿಮಾಲಯನ್ ಬೆಲ್ಟ್ ನಲ್ಲಿರುವ ದೇಶಗಳ ನಡುವೆ ಸಹಕಾರ ವೃದ್ಧಿಸುವ ಉದ್ದೇಶದಿಂದ ಈ ವೇದಿಕೆಯನ್ನು ಚೀನಾ 2018ರಲ್ಲಿ ಸ್ಥಾಪಿಸಿದೆ. ಈ ಬಾರಿಯ ಸಮ್ಮೇಳನಕ್ಕೆ ಟಿಬೆಟ್‍ನ ನ್ಯಿಂಗ್ಚಿ ನಗರ ವೇದಿಕೆಯಾಗಿದ್ದು ಚೀನಾ ಸರಕಾರ ನಿರ್ವಹಿಸುತ್ತಿರುವ ಈ ನಗರ ಭಾರತದ ಈಶಾನ್ಯದ ಅರುಣಾಚಲ ಪ್ರದೇಶದಿಂದ 160 ಕಿ.ಮೀ ದೂರದಲ್ಲಿದೆ.

ಸಮ್ಮೇಳನದಲ್ಲಿ ಭಾಗವಹಿಸುವುದನ್ನು ಪಾಕ್ ದೃಢಪಡಿಸಿದೆ. `ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ವಿಶೇಷ ಆಹ್ವಾನದ ಮೇರೆಗೆ, ಟಿಬೆಟ್ ಸ್ವಾಯತ್ತ ಪ್ರಾಂತದ ನ್ಯಿಂಗ್ಚಿಯಲ್ಲಿ ಅಕ್ಟೋಬರ್ 4-5ರಂದು ನಡೆಯಲಿರುವ 3ನೇ ಟ್ರಾನ್ಸ್-ಹಿಮಾಲಯ ಫೋರಂನ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಪಾಲ್ಗೊಳ್ಳಲಿದ್ದಾರೆ' ಎಂದು ಪಾಕ್ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲಾನಿ ಮಾತನಾಡಲಿದ್ದು ಬಳಿಕ ಸಮ್ಮೇಳನದ ನೇಪಥ್ಯದಲ್ಲಿ ಚೀನಾ ಮತ್ತು ಅಫ್ಘಾನ್ ವಿದೇಶಾಂಗ ಸಚಿವರ ಜತೆ, ಮಂಗೋಲಿಯಾದ ಉಪಪ್ರಧಾನಿ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಭೌಗೋಳಿಕ ಸಂಪರ್ಕ ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳ ಶ್ರೇಣಿಯನ್ನು ಪರಿಹರಿಸುವ ಗುರಿಯೊಂದಿಗೆ ವೇದಿಕೆಯನ್ನು ರಚಿಸಲಾಗಿದ್ದು ಈ ವರ್ಷದ ಸಮ್ಮೇಳನದ ವಿಷಯ `ಪರಿಸರ ನಾಗರಿಕತೆ ಮತ್ತು ಪರಿಸರ ಸಂರಕ್ಷಣೆ' ಎಂದಾಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ.

ಭಾರತ-ಚೀನಾ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲೇ ಅರುಣಾಚಲದ ಗಡಿ ಬಳಿ ಚೀನಾ ಈ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಗಮನಾರ್ಹವಾಗಿದೆ. ಲಡಾಕ್‍ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬಗ್ಗೆ ಉಭಯ ದೇಶಗಳ ನಡುವೆ ವಿವಾದವಿದೆ. 2020ರ ಜೂನ್‍ನಲ್ಲಿ ಲಡಾಕ್‍ನ ಗಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವಿನ ಘರ್ಷಣೆಯಿಂದ ಉಭಯ ದೇಶಗಳ ಸಂಬಂಧ ಅಸಹಜವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು.

ಚೀನಾ ತಗಾದೆ

ಅರುಣಾಚಲ ಪ್ರದೇಶವನ್ನು ದಕ್ಷಿಣ ಚೀನಾ ಎಂದು ಕರೆಯುವ ಚೀನಾ ಅದು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದೆ. ಆಗಸ್ಟ್ ನಲ್ಲಿ ಚೀನಾವು ಅರುಣಾಚಲ ಪ್ರದೇಶ ಮತ್ತು ಪೂರ್ವ ಲಡಾಖ್‍ನ ಅಕ್ಸಾಯ್ ಚಿನ್ ಪ್ರದೇಶಗಳನ್ನು ಒಳಗೊಂಡಿರುವ ಹೊಸ `ಪ್ರಮಾಣಿತ' ನಕ್ಷೆಯನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ತನ್ನ ಪ್ರಾದೇಶಿಕ ಹಕ್ಕುಗಳನ್ನು ಮರುಸ್ಥಾಪಿಸುವ ಪ್ರಯತ್ನದ ಭಾಗವಾಗಿ 2021ರಲ್ಲಿ ಚೀನಾವು ಅರುಣಾಚಲ ಪ್ರದೇಶದ 15 ಗ್ರಾಮಗಳಿಗೆ ಮರುನಾಮಕರಣ ಮಾಡಿದ್ದು ಈ ನಡೆಯನ್ನು ಭಾರತ ತಿರಸ್ಕರಿಸಿದೆ.

ಕಳೆದ ತಿಂಗಳು ಚೀನಾದಲ್ಲಿ ಆರಂಭಗೊಂಡ ಏಶ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಅರುಣಾಚಲ ಪ್ರದೇಶದ ಮೂವರು ಸ್ಪರ್ಧಿಗಳಿಗೆ ಚೀನಾ ವೀಸಾ ನಿರಾಕರಿಸಿತ್ತು. ಇದನ್ನು ಪ್ರತಿಭಟಿಸಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News