ಫೆಲೆಸ್ತೀನೀಯರು ಸ್ವಂತ ನೆಲದಲ್ಲಿ ಶಾಂತಿಯಿಂದ ಬದುಕುವ ಹಕ್ಕು ಹೊಂದಿದ್ದಾರೆ: ಪೋಪ್
ಪೋಪ್ ಲಿಯೋ | Photo Credit : PTI
ವ್ಯಾಟಿಕನ್ ಸಿಟಿ, ಜ.10: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಗಾಝಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಪೋಪ್ ಲಿಯೋ ದುಃಖ ವ್ಯಕ್ತಪಡಿಸಿದ್ದು, ಫೆಲೆಸ್ತೀನೀಯರು ತಮ್ಮ ಸ್ವಂತ ನೆಲದಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುವ ಹಕ್ಕು ಹೊಂದಿರುವ ಫೆಲೆಸ್ತೀನೀಯ ನಾಗರಿಕರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಗಾಝಾದಲ್ಲಿನ ನಾಗರಿಕರಿಗೆ ತಮ್ಮದೇ ಭೂಮಿಯಲ್ಲಿ ಶಾಶ್ವತ ಶಾಂತಿ ಮತ್ತು ನ್ಯಾಯಯುತ ಭವಿಷ್ಯದ ಭರವಸೆಯನ್ನು ನೀಡಬೇಕು.
ಅಕ್ಟೋಬರ್‌ನಲ್ಲಿ ಘೋಷಿಸಲಾದ ಕದನ ವಿರಾಮದ ಹೊರತಾಗಿಯೂ ನಾಗರಿಕರ ಮಾನವೀಯ ನೋವು ಮುಂದುವರಿದಿದೆ. ಗಾಝಾದಲ್ಲಿರುವ ಫೆಲೆಸ್ತೀನೀಯರು ಸೇರಿದಂತೆ ಎಲ್ಲಾ ಫೆಲೆಸ್ತೀನೀಯರಿಗೆ ಹಾಗೂ ಎಲ್ಲಾ ಇಸ್ರೇಲ್ ನಾಗರಿಕರಿಗೆ ಶಾಶ್ವತ ಶಾಂತಿ ಮತ್ತು ನ್ಯಾಯದ ಭವಿಷ್ಯವನ್ನು ಖಾತ್ರಿ ಪಡಿಸುವ ಗುರಿಯನ್ನು ಹೊಂದಿರುವ ಪ್ರತಿಯೊಂದು ರಾಜತಾಂತ್ರಿಕ ಉಪಕ್ರಮವನ್ನೂ ವ್ಯಾಟಿಕನ್ ನಿಖರವಾಗಿ ಅನುಸರಿಸುತ್ತದೆ ಎಂದು ಲಿಯೋ ಹೇಳಿದ್ದಾರೆ.