ಹಿಂಸಾತ್ಮಕ ಪ್ರತಿಭಟನೆಗಳಿಗೆ ಅಮೆರಿಕ ಹೊಣೆ: ವಿಶ್ವಸಂಸ್ಥೆಗೆ Iran ರಾಯಭಾರಿ ಪತ್ರ
Photo Credit : AP \ PTI
ಟೆಹ್ರಾನ್, ಜ.10: ಇರಾನ್ ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳು ಹಿಂಸಾತ್ಮಕ, ದೇಶದ್ರೋಹಿ ಚಟುವಟಿಕೆಗಳು ಹಾಗೂ ವಿಧ್ವಂಸಕ ಕೃತ್ಯಗಳಾಗಿ ರೂಪಾಂತರಗೊಳ್ಳಲು ಅಮೆರಿಕವೇ ಹೊಣೆ ಎಂದು ವಿಶ್ವಸಂಸ್ಥೆಯಲ್ಲಿ ಇರಾನಿನ ರಾಯಭಾರಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಇಸ್ರೇಲಿ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಮೆರಿಕಾ ನಡೆಸುತ್ತಿರುವ ಕಾನೂನುಬಾಹಿರ ಹಾಗೂ ಬೇಜವಾಬ್ದಾರಿ ನಡವಳಿಕೆಯನ್ನು, ಅಸ್ಥಿರತೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿರುವ ಕ್ರಮಗಳನ್ನು ಇರಾನ್ ಖಂಡಿಸುತ್ತದೆ ಎಂದು ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.
ವಿಶ್ವಸಂಸ್ಥೆಯ ಚಾರ್ಟರ್ ಅನ್ನು (ಸನದು) ದುರ್ಬಲಗೊಳಿಸುವ, ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯ ಅಡಿಪಾಯಗಳಿಗೆ ಬೆದರಿಕೆಯೊಡ್ಡುವ ‘ಅಸ್ಥಿರಗೊಳಿಸುವ ಕ್ರಮಗಳನ್ನು’ ಅಮೆರಿಕಾ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇರಾನ್ ನಲ್ಲಿ ವ್ಯಾಪಕಗೊಂಡಿರುವ ಪ್ರತಿಭಟನೆ 14ನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು, ಕಾರ್ಯತಂತ್ರದ ಮೂಲಸೌಕರ್ಯಗಳು ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ದೃಢಸಂಕಲ್ಪ ಹೊಂದಿರುವುದಾಗಿ ಇರಾನ್ ಸೇನೆ ಹೇಳಿದೆ. ಈ ನಡುವೆ ರಾಜಧಾನಿ ಟೆಹ್ರಾನ್, ಮಶ್ಹಾದ್ ಸೇರಿದಂತೆ ಪ್ರಮುಖ ನಗರಗಳ ಬೀದಿಗಳಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಟೆಹ್ರಾನ್‌ನ ಪಶ್ಚಿಮದ ಕರಾಜ್ ನಗರದಲ್ಲಿ ಪುರಸಭೆ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಗುರುವಾರ ರಾತ್ರಿ 50ಕ್ಕೂ ಹೆಚ್ಚು ಬ್ಯಾಂಕ್‌ಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಟೆಹ್ರಾನ್ ಮೇಯರ್ ರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.