×
Ad

ವೆನೆಝುವೆಲಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 920ಕ್ಕೆ ಏರಿಕೆ

Update: 2026-06-27 07:26 IST

Photo: x.com/PolymarketIntel

ಕಾರಕಸ್: ಬುಧವಾರ ಸಂಜೆ ಸಂಭವಿಸಿದ ಅವಳಿ ಭೂಕಂಪದಿಂದ ಕಂಗೆಟ್ಟಿರುವ ವೆನೆಝುವೆಲಾದಲ್ಲಿ ಅಂತರರಾಷ್ಟ್ರೀಯ ಪರಿಹಾರ ತಂಡಗಳು ಸಮರೋಪಾದಿ ಕಾರ್ಯಾಚರಣೆ ಮುಂದುವರಿಸಿದ್ದು, ಸಾವಿನ ಸಂಖ್ಯೆ 920ಕ್ಕೇರಿದೆ ಹಾಗೂ ಗಾಯಾಳುಗಳ ಸಂಖ್ಯೆ 3360ನ್ನು ತಲುಪಿದೆ ಎಂದು ಹಂಗಾಮಿ ಅಧ್ಯಕ್ಷೆ ಡೆಲಸಿ ರೋಡ್ರಿಗಸ್ ಹೇಳಿದ್ದಾರೆ.

ಏತನ್ಮಧ್ಯೆ, ಶುಕ್ರವಾರ ರಾತ್ರಿ ದೇಶದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಕಾರಾಕಸ್ ಮತ್ತು ಮರಾಕೆಯಲ್ಲಿ ಕಂಪನದ ಅನುಭವವಾಗಿದೆ ಎಂದು ಇಎಂಎಸ್ಇ ಹೇಳಿದೆ.

"ಶೋಧ ಮತ್ತು ಪರಿಹಾರ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿ ಹಾಕಿಕೊಂಡವರನ್ನು ರಕ್ಷಿಸಲಿದ್ದೇವೆ," ಎಂದು ಸರ್ಕಾರಿ ಹಾಗೂ ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ನಾವು ಅವಿರತ ಕಾರ್ಯಾಚರಣೆ ಮುಂದುವರಿಸಿದ್ದೇವೆ ಎಂದು ವಿವರಿಸಿದರು.

ಕರಾವಳಿ ರಾಜ್ಯವಾದ ಲಾ ಗುವೇರಾದಲ್ಲಿ 7.2 ಹಾಗೂ 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ್ದು, ಇಡೀ ಪ್ರದೇಶ ಮಿಲಿಟರಿ ನಿಯಂತ್ರಣದಲ್ಲಿದೆ. ಪರಿಹಾರ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ಸಂತ್ರಸ್ತರಿಗೆ ಆಹಾರ ಮತ್ತು ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇನ್ನೂ ಅಪಾರ ಸಂಖ್ಯೆಯ ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದರು.

ರಾಜಧಾನಿ ಕಾರಾಕಸ್ ನಲ್ಲಿ 2 ಮಿಲಿಯನ್ ಮಂದಿ ಸೇರಿದಂತೆ ಒಟ್ಟು 6.76 ಮಿಲಿಯನ್ ಮಂದಿ ಭೂಕಂಪದಿಂದ ತೊಂದರೆಗೀಡಾಗಿರುವ ಸಾಧ್ಯತೆ ಇದೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಅಂದಾಜಿಸಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಅಮೆರಿಕನ್ನರಿಗಾಗಿ ಇರುವ ಪ್ರಾದೇಶಿಕ ನಿರ್ದೇಶಕಿ ಲೊಯಿಸ್ ಪೇಸ್ ಅವರ ಪ್ರಕಾರ, ಜನತೆ ತಮ್ಮ ಮನೆಗಳಿಗೆ ಮರಳಲು ಇನ್ನೂ ಭಯಪಡುತ್ತಿದ್ದಾರೆ. ಅವಶೇಷಗಳಡಿ ಧೂಳು ಹಾಗೂ ರಕ್ತದಿಂದ ಮುಚ್ಚಿರುವ ಮಕ್ಕಳು ಸೇರಿದಂತೆ ಸಂತ್ರಸ್ತರಿಗಾಗಿ ತುರ್ತು ಸ್ಪಂದನೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News