×
Ad

Venezuela | ಮತ್ತೆ 4.9 ತೀವ್ರತೆಯ ಭೂಕಂಪ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Update: 2026-06-27 09:30 IST

Photo: x.com/MOSSADil

ಕಾರಾಕಾಸ್, ಜೂ. 27: ಈ ವಾರದ ಆರಂಭದಲ್ಲಿ ಸಂಭವಿಸಿದ್ದ ವಿನಾಶಕಾರಿ ಜೋಡಿ ಭೂಕಂಪಗಳಿಂದ ಇನ್ನೂ ಚೇತರಿಸಿಕೊಳ್ಳದ ವೆನೆಝುವೆಲಾದಲ್ಲಿ ಶುಕ್ರವಾರ ಮತ್ತೆ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಹೊಸ ಭೂಕಂಪದಿಂದ ದೇಶದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರದ (EMSC) ಪ್ರಕಾರ, ಉತ್ತರ ವೆನೆಝುವೆಲಾದ ಮರಕೇ ನಗರದಿಂದ ವಾಯವ್ಯಕ್ಕೆ ಸುಮಾರು 61 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಈ ಭೂಕಂಪದ ಕಂಪನಗಳು ಮರಕೇ ಮತ್ತು ರಾಜಧಾನಿ ಕಾರಾಕಾಸ್‌ನಲ್ಲಿಯೂ ಅನುಭವಕ್ಕೆ ಬಂದಿವೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ವೆನೆಝುವೆಲಾದಲ್ಲಿ ಬುಧವಾರ ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ್ದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿದ್ದವು. ಈ ದುರಂತದಲ್ಲಿ ಇದುವರೆಗೆ ಕನಿಷ್ಠ 920 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಅಂದಾಜಿನ ಪ್ರಕಾರ, ಅಂತಿಮ ಸಾವಿನ ಸಂಖ್ಯೆ 10 ಸಾವಿರ ಮೀರಬಹುದು. ಇದುವರೆಗೆ ಕನಿಷ್ಠ 3,360 ಮಂದಿ ಗಾಯಗೊಂಡಿದ್ದು, 172ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ವೆನೆಝುವೆಲಾ ಸರ್ಕಾರದ ಪ್ರಕಾರ, ಕಾಣೆಯಾದವರ ಸಂಖ್ಯೆ 50 ಸಾವಿರ ಮೀರಿದೆ.

ರಾಜಧಾನಿ ಕಾರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದು ಬಿದ್ದಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರವಾಗಿ ಮುಂದುವರಿದಿವೆ. ಹೆಚ್ಚು ಹಾನಿಗೊಳಗಾದ ಲಾ ಗುಯಿರಾ ರಾಜ್ಯದ ಕೆಲವು ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಡಿಯೋಸ್ಡಾಡೊ ಕ್ಯಾಬೆಲ್ಲೊ ತಿಳಿಸಿದ್ದಾರೆ.

ಭೂಕಂಪ ಪೀಡಿತ ಪ್ರದೇಶಗಳ ನಿವಾಸಿಗಳು ಸ್ವಯಂಪ್ರೇರಿತವಾಗಿ ಬದುಕುಳಿದವರ ಶೋಧ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಕೆಲವರು ತಮ್ಮ ಖಾಸಗಿ ವಾಹನಗಳನ್ನು ತಾತ್ಕಾಲಿಕ ಆಂಬ್ಯುಲೆನ್ಸ್‌ಗಳಾಗಿ ಬಳಸುತ್ತಿದ್ದಾರೆ.

ಇದೇ ವೇಳೆ, 2024ರ ಅಧ್ಯಕ್ಷೀಯ ಚುನಾವಣೆಯ ನಂತರ ನಿರ್ಬಂಧಿಸಲಾಗಿದ್ದ ಎಕ್ಸ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿರ್ಬಂಧಗಳನ್ನು ವೆನೆಝುವೆಲಾ ಸರ್ಕಾರ ಸಡಿಲಗೊಳಿಸಿದೆ. ಇದರಿಂದ ಕಾಣೆಯಾದವರ ಕುರಿತು ಮಾಹಿತಿ ಹಂಚಿಕೊಳ್ಳಲು ಮತ್ತು ರಕ್ಷಣಾ ಕಾರ್ಯಗಳಿಗೆ ನೆರವಾಗುತ್ತಿದೆ.

"ಸಮುದಾಯದ ಸದಸ್ಯರೇ ಅನೇಕ ಜನರನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಲು ಇನ್ನಷ್ಟು ಕ್ರೇನ್‌ಗಳ ಅಗತ್ಯವಿದೆ. ಇನ್ನೂ ಅನೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ," ಎಂದು ತಮ್ಮ ಆರು ವರ್ಷದ ಮಗ ಮತ್ತು ಐವರು ಸಂಬಂಧಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವುದಾಗಿ ಹೇಳಿದ ಜೆನ್ನಿಫರ್ ಪಲಾಸಿಯೊಸ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News