×
Ad

ಕಾಂಗೋದಲ್ಲಿ ಎಬೋಲಾ ಅಟ್ಟಹಾಸ : ಸೋಂಕಿಗೆ ಬಲಿಯಾದವರ ಸಂಖ್ಯೆ 600ಕ್ಕೆ ಏರಿಕೆ

Update: 2026-07-09 21:30 IST

Photo Credit : AP

ಕಿನ್ಶಾಸ,ಜು.9: ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಇತ್ತೀಚೆಗೆ ಭುಗಿಲೆದ್ದ ಎಬೋಲಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಈವರೆಗೆ ಕನಿಷ್ಠ 600 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಓ) ಗುರುವಾರ ತಿಳಿಸಿದೆ. ಎಬೋಲಾಗೆ ಬಲಿಯಾದವರ ಸಂಖ್ಯೆ 500 ತಲುಪಿದ ಮೂರು ದಿನಗಳ ಬಳಿಕವಷ್ಟೇ ಇನ್ನೂ 100 ಮಂದಿ ಈ ಸೋಂಕಿನಿಂದಾಗಿ ಮೃತಪಟ್ಟಿರುವುದು ಆರೋಗ್ಯ ತಜ್ಞರಲ್ಲಿ ಕಳವಳ ಮೂಡಿಸಿದೆ.

ಮೇ ತಿಂಗಳ ಮಧ್ಯಭಾಗದಲ್ಲಿ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಹೊಸತಾಗಿ ಎಬೋಲಾ ಕಾಣಿಸಿಕೊಂಡ ಬಳಿಕ ಒಟ್ಟು 1,759 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರಲ್ಲಿ 600 ಮಂದಿ ಮೃತಪಟ್ಟಿದ್ದಾರೆಂದು ಡಬ್ಲ್ಯುಎಚ್‌ಓ ವರದಿ ತಿಳಿಸಿದೆ.

ನೆರೆಯ ರಾಷ್ಟ್ರವಾದ ಉಗಾಂಡದಲ್ಲಿ ಒಟ್ಟು 20 ಎಬೋಲಾ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಎಬೋಲಾಗೆ ಬಲಿಯಾಗಿದ್ದಾರೆ. 17 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಎಬೋಲಾ ಸೋಂಕು ಹರಡುತ್ತಿದೆ, ಅದು ಎಷ್ಟು ಪ್ರಮಾಣದಲ್ಲಿ ಹರಡಿದೆಯೆಂಬುದು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲವೆಂದು, ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಯಾಗಿರುವ ಆ್ಯನ್ ಅನ್ಸಿಯಾ ತಿಳಿಸಿದ್ದಾರೆ.

ಬುಂಡಿಬುಗ್ಯೋ ಎಂಬ ಅಪರೂಪದ ಪ್ರಭೇದದ ಎಬೋಲಾ ವೈರಸ್‌ನಿಂದಾಗಿ ಸೋಂಕು ಹರಡುತ್ತಿದ್ದು, ಅದಕ್ಕೆ ಈವರೆಗೆ ಯಾವುದೇ ಲಸಿಕೆಯಾಗಲಿ ಅಥವಾ ಚಿಕಿತ್ಸಾ ವಿಧಾನವಾಗಲಿ ಅನುಮೋದನೆಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News