ಬಹ್ರೇನ್, ಕುವೈತ್, ಖತರ್ ನಲ್ಲಿನ ಅಮೆರಿಕ ನೆಲೆಗಳ ಮೇಲೆ ಡ್ರೋನ್ ದಾಳಿ: ಇರಾನ್
ಸಾಂದರ್ಭಿಕ ಚಿತ್ರ (PTI)
ಟೆಹ್ರಾನ್: ಬಹ್ರೇನ್, ಕುವೈತ್ ಹಾಗೂ ಖತರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿದೆ.
ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳ ವಿರುದ್ಧ ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುವೈತ್‌ನಲ್ಲಿರುವ ಪೇಟ್ರಿಯಾಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ, ಖತರ್‌ನಲ್ಲಿರುವ ಮುಂಚಿತ ಎಚ್ಚರಿಕೆ ಉಪಗ್ರಹ ಆಂಟೆನಾ ತಾಣ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕ ಸೇನೆಗೆ ಸೇರಿದ ಇಂಧನ ಸಂಗ್ರಹ ಟ್ಯಾಂಕ್ ಗಳನ್ನು ದಾಳಿಯ ಗುರಿಯಾಗಿಸಲಾಗಿದೆ ಎಂದು ಅದು ಹೇಳಿದೆ.
ಈ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿದೆ.
"ಯಾವುದೇ ಸಂದರ್ಭದಲ್ಲಿಯೂ ಅಮೆರಿಕದ ಅಧ್ಯಕ್ಷರ ಗುರಿಗಳು ಮತ್ತು ಆಕಾಂಕ್ಷೆಗಳು ಈಡೇರುವಂತೆ ಅವಕಾಶ ನೀಡುವುದಿಲ್ಲ. ಇಸ್ಲಾಮಿಕ್ ಕ್ರಾಂತಿಯ ಉನ್ನತ ಆದರ್ಶಗಳನ್ನು ಅಂತಿಮ ವಿಜಯದವರೆಗೆ ರಕ್ಷಿಸುತ್ತೇವೆ" ಎಂದು ಇರಾನ್‌ನ ಸಶಸ್ತ್ರ ಪಡೆಗಳು ಪ್ರಕಟಣೆಯಲ್ಲಿ ತಿಳಿಸಿವೆ ಎಂದು Aljazeera ವರದಿ ಮಾಡಿದೆ.