×
Ad

"ನೊಬೆಲ್ ಶಾಂತಿ ಪ್ರಶಸ್ತಿಗೆ ನಾನೇ ಅರ್ಹ": ಭಾರತ–ಪಾಕಿಸ್ತಾನ ಕದನ ವಿರಾಮದಲ್ಲಿ ತಮ್ಮ ಪಾತ್ರ ಪುನರುಚ್ಚರಿಸಿದ ಟ್ರಂಪ್

"11 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು"

Update: 2026-07-09 16:18 IST

ಡೊನಾಲ್ಡ್ ಟ್ರಂಪ್  | Photo Credit : PTI, AP

ವಾಷಿಂಗ್ಟನ್: ಭಾರತ–ಪಾಕಿಸ್ತಾನ ಸಂಘರ್ಷವನ್ನು ತಡೆಯುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಉಭಯ ದೇಶಗಳ ನಡುವಿನ ಘರ್ಷಣೆ ಪರಮಾಣು ಯುದ್ಧವಾಗಿ ವಿಕೋಪಗೊಳ್ಳುವ ಸಾಧ್ಯತೆ ಇತ್ತು. 11 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಹಾಗೂ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳಬಹುದಾಗಿತ್ತು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಅಂತರರಾಷ್ಟ್ರೀಯ ಸಂಘರ್ಷಗಳನ್ನು ಶಮನಗೊಳಿಸಲು ಮಾಡಿದ ತಮ್ಮ ಪ್ರಯತ್ನಗಳ ಹಿನ್ನೆಲೆಯಲ್ಲಿ ತಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದೂ ಪ್ರತಿಪಾದಿಸಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ ನ ರಾಯಲ್ ಏರ್ ಫೋರ್ಸ್ ಮಿಲ್ಡೆನ್‌ಹಾಲ್‌ನಲ್ಲಿದ್ದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ–ಪಾಕಿಸ್ತಾನ ನಡುವಿನ ಯುದ್ಧ ಇನ್ನೊಂದು ವಾರ ಮುಂದುವರಿದಿದ್ದರೆ ಅದು ಪರಮಾಣು ಸಂಘರ್ಷವಾಗಿ ಮಾರ್ಪಡಬಹುದಾಗಿತ್ತು ಎಂದು ಹೇಳಿದರು.

"ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಆ ಯುದ್ಧ ತೀವ್ರವಾಗಿ ನಡೆಯುತ್ತಿತ್ತು. ಅದು ಇನ್ನೊಂದು ವಾರ ಮುಂದುವರಿದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿತ್ತು. ಹನ್ನೊಂದು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಆ ಯುದ್ಧ ಪರಮಾಣು ಯುದ್ಧವಾಗಿ ಮಾರ್ಪಡಬಹುದಾಗಿತ್ತು" ಎಂದು ಟ್ರಂಪ್ ಹೇಳಿದರು.

ಯುದ್ಧವನ್ನು ನಿಲ್ಲಿಸುವಲ್ಲಿ ತಮ್ಮ ಪಾತ್ರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮೆಚ್ಚಿದ್ದಾರೆ ಎಂದೂ ಅವರು ಹೇಳಿದರು.

"ಅಧ್ಯಕ್ಷ ಟ್ರಂಪ್ 3ರಿಂದ 5 ಕೋಟಿ ಜನರ ಜೀವಗಳನ್ನು ಉಳಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಬಹುದಾಗಿತ್ತು" ಎಂದು ಟ್ರಂಪ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡ ಸಂದರ್ಭದಲ್ಲಿ, ಎರಡೂ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಎಚ್ಚರಿಕೆ ನೀಡುವ ಮೂಲಕ ಪೂರ್ಣ ಪ್ರಮಾಣದ ಯುದ್ಧವನ್ನು ತಡೆದಿದ್ದೇನೆ ಎಂದು ಟ್ರಂಪ್ ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದರು. ಆದರೆ, ಈ ಹೇಳಿಕೆಯನ್ನು ಭಾರತ ಸರ್ಕಾರ ನಿರಂತರವಾಗಿ ತಿರಸ್ಕರಿಸಿದೆ.

ಸುದ್ದಿಗಾರರೊಂದಿಗೆ ನಡೆದ ಸಂವಾದದಲ್ಲಿ ವಿಶ್ವದ ವಿವಿಧ ಭಾಗಗಳ ಸಂಘರ್ಷಗಳನ್ನು ಬಗೆಹರಿಸುವಲ್ಲಿ ತಮ್ಮ ಪಾತ್ರದ ಬಗ್ಗೆಯೂ ಟ್ರಂಪ್ ಪ್ರಸ್ತಾಪಿಸಿದರು.

"ನಾನು ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ" ಎಂದು ಹೇಳಿದ ಅವರು, ಅಝೆರ್ಬೈಜಾನ್–ಅರ್ಮೇನಿಯಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ–ರುವಾಂಡಾ ನಡುವಿನ ಸಂಘರ್ಷಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.

ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುವ ವೇಳೆ ಟ್ರಂಪ್ ಈ ಹೇಳಿಕೆಗಳನ್ನು ನೀಡಿದರು. ಮಚಾಡೊ ಅವರು ವೆನೆಝುವೆಲಾಗೆ ಮರಳದಂತೆ ಸಲಹೆ ನೀಡುವುದನ್ನು ಅವರು ನಿರಾಕರಿಸಿದರು. ಅವರನ್ನು "ಅದ್ಭುತ ವ್ಯಕ್ತಿ" ಎಂದೂ ಬಣ್ಣಿಸಿದರು.

ನೊಬೆಲ್ ಶಾಂತಿ ಪ್ರಶಸ್ತಿಯ ಕುರಿತು ಮಾತನಾಡಿದ ಟ್ರಂಪ್, ವಿಶ್ವದ ವಿವಿಧ ಸಂಘರ್ಷಗಳನ್ನು ಶಮನಗೊಳಿಸಲು ಮಾಡಿದ ತಮ್ಮ ಪ್ರಯತ್ನಗಳ ಆಧಾರದ ಮೇಲೆ, ಈವರೆಗೆ ಪ್ರಶಸ್ತಿ ಪಡೆದವರಿಗಿಂತ ತಾನೇ ಹೆಚ್ಚು ಅರ್ಹ ಎಂದು ಹೇಳಿದರು.

"ಯುದ್ಧಗಳನ್ನು ಇತ್ಯರ್ಥಪಡಿಸದವರೂ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ. ಆದರೆ ನಾನು ಆ ಪ್ರಶಸ್ತಿಗೆ ಅವರಿಗಿಂತ ಹೆಚ್ಚು ಅರ್ಹ. ನನ್ನ ವ್ಯಕ್ತಿತ್ವದ ಕಾರಣದಿಂದ ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿದೆ" ಎಂದು ಟ್ರಂಪ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ದೊಡ್ಡ ಮಟ್ಟದ ಸಂಘರ್ಷದ ಅಂಚಿನಲ್ಲಿದ್ದವು ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ ಟ್ರಂಪ್, "ನೀವು ಹೋರಾಟ ಮುಂದುವರಿಸಿದರೆ ನಿಮ್ಮ ದೇಶದ ಮೇಲೆ ಶೇ.200ರಷ್ಟು ಸುಂಕ ವಿಧಿಸುತ್ತೇನೆ ಎಂದು ಹೇಳಿದ್ದೆ. ಇದೇ ಮಾತನ್ನು ಎರಡೂ ದೇಶಗಳಿಗೆ ಹೇಳಿದ್ದೆ. ಭಾರತ ಮತ್ತು ಪಾಕಿಸ್ತಾನದ ವಿಚಾರದಲ್ಲೂ ಅದನ್ನೇ ಮಾಡಿದ್ದೆ" ಎಂದು ಹೇಳಿದರು.

ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ನೇರ ಮಾತುಕತೆಯ ಮೂಲಕವೇ ಕದನ ವಿರಾಮ ಜಾರಿಯಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನದೊಂದಿಗಿನ ಎಲ್ಲ ಬಾಕಿ ವಿಷಯಗಳನ್ನು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಬೇಕು ಎಂಬ ತನ್ನ ದೀರ್ಘಕಾಲದ ನಿಲುವನ್ನು ಭಾರತ ಪುನರುಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News