ಎರಡು ದಿನಗಳ ಅಮೆರಿಕ ದಾಳಿಯಲ್ಲಿ ಒಟ್ಟು 14 ಮಂದಿ ಮೃತ್ಯು: ಇರಾನ್
Photo: x.com/HormuzLetter
ಟೆಹ್ರಾನ್: ಕಳೆದ ಎರಡು ದಿನಗಳಲ್ಲಿ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 78 ಮಂದಿ ಗಾಯಗೊಂಡಿದ್ದಾರೆಂದು ಇರಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಯಾಳುಗಳ ಪೈಕಿ 47 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ವೈದ್ಯಕೀಯ ಶುಶ್ರೂಷೆಯ ಬಳಿಕ ಬಿಡುಗಡೆಗೊಂಡಿದ್ದಾರೆ ಎಂದು ಇರಾನ್‌ನ ಸಾರ್ವಜನಿಕ ಸಂಪರ್ಕ ಸಚಿವ ಹುಸೈನ್ ಕೆರ್ಮಾನ್‌ಪೊರ್ ತಿಳಿಸಿದ್ದಾರೆ.
ಟ್ರಂಪ್ ಬೆದರಿಕೆಗೆ ಮಣಿಯಲಾರೆವು : ಇರಾನ್
ಹಾರ್ಮುಝ್ ಜಲಸಂಧಿಯನ್ನು ನಿರ್ವಹಿಸುವ ಹಕ್ಕನ್ನು ಮಧ್ಯಂತರ ಕದನವಿರಾಮ ಒಪ್ಪಂದವು ತನಗೆ ನೀಡಿದೆ ಎಂದು ಇರಾನ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಪಶ್ಚಿಮ ಏಶ್ಯದಲ್ಲಿ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಯ ಪ್ರಮುಖ ಸಂಧಾನಕಾರರಲ್ಲೊಬ್ಬರಾದ ಇರಾನ್ ಸಂಸತ್‌ನ ಸ್ಪೀಕರ್ ಮೊಹಮ್ಮದ್ ಕ್ವಾಲಿಬಾಫ್ ಅವರು ಟ್ರಂಪ್ ಬೆದರಿಕೆಗಳಿಗೆ ಇರಾನ್ ಮಣಿಯುವುದಿಲ್ಲವೆಂದು ಸವಾಲೆಸೆದಿದ್ದಾರೆ. ‘‘ ಬೆದರಿಸುವ ಹಾಗೂ ಸುಲಿಗೆ ಮಾಡುವ ಯುಗವು ಮುಕ್ತಾಯಗೊಂಡಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಮಣಿಯುವುದಿಲ್ಲ’’ ಎಂದು ಹೇಳಿದ್ದಾರೆ.