ಖತರ್ ಉಡುಗೊರೆಯಾಗಿ ನೀಡಿದ ಜೆಟ್ ಬದಲಿಗೆ ಟ್ರಂಪ್ ಹಳೆಯ ಏರ್ ಫೋರ್ಸ್ ಒನ್‌ನಲ್ಲೇ ಅಮೆರಿಕಕ್ಕೆ ವಾಪಸಾಗಿದ್ದು ಏಕೆ?
Photo credit: whitehouse.gov
ವಾಷಿಂಗ್ಟನ್/ಅಂಕಾರಾ: ಇರಾನ್ ನೊಂದಿಗೆ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖತರ್ ಉಡುಗೊರೆಯಾಗಿ ನೀಡಿದ ಹೊಸ ಬೋಯಿಂಗ್ 747-8 ಜೆಟ್ ವಿಮಾನದ ಬದಲಿಗೆ ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲಿ ಅಮೆರಿಕಕ್ಕೆ ಮರಳಿದ್ದಾರೆ. ಹೊಸ ವಿಮಾನದ ಭದ್ರತೆ ಕುರಿತು ಆತಂಕ ವ್ಯಕ್ತವಾಗಿರುವುದೇ ಈ ನಿರ್ಧಾರಕ್ಕೆ ಕಾರಣ ಎಂಬ ವರದಿಗಳನ್ನು ಶ್ವೇತಭವನ ನಿರಾಕರಿಸಿದೆ.
ಅಂಕಾರಾದಲ್ಲಿ ನಡೆದ NATO ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್, ಯುಕೆಯ ಆರ್‌ಎಎಫ್ ಮಿಲ್ಡೆನ್‌ಹಾಲ್ ವಾಯುನೆಲೆಯಲ್ಲಿ ಸ್ವಲ್ಪ ಸಮಯ ನಿಲುಗಡೆ ಮಾಡಿದ ಬಳಿಕ ಅಲ್ಲಿಂದ ಹಳೆಯ ಏರ್ ಫೋರ್ಸ್ ಒನ್‌ನಲ್ಲಿ ಅಮೆರಿಕದತ್ತ ಪ್ರಯಾಣಿಸಿದರು.
ʼದಿ ನ್ಯೂಯಾರ್ಕ್ ಟೈಮ್ಸ್ʼ ವರದಿ ಪ್ರಕಾರ, ಅಮೆರಿಕ–ಇರಾನ್ ಸಂಘರ್ಷ ಮತ್ತೆ ತೀವ್ರಗೊಂಡ ಬಳಿಕ ಯುಎಸ್ ಸೀಕ್ರೆಟ್ ಸರ್ವಿಸ್‌ನ ಸಲಹೆಯಂತೆ ಟ್ರಂಪ್ ಹೊಸ ಬೋಯಿಂಗ್ 747-8 ಬದಲಿಗೆ ಹಳೆಯ ಅಧ್ಯಕ್ಷೀಯ ವಿಮಾನವನ್ನು ಬಳಸಿದರು. ಖತರ ಉಡುಗೊರೆಯಾಗಿ ನೀಡಿದ ಹೊಸ ವಿಮಾನದಲ್ಲಿ ಈಗಿನ ಏರ್ ಫೋರ್ಸ್ ಒನ್ ವಿಮಾನಗಳಲ್ಲಿರುವ ಎಲ್ಲ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು ಇನ್ನೂ ಸಂಪೂರ್ಣವಾಗಿ ಅಳವಡಿಕೆಯಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೂ ಇದು ಯಾವುದೇ ನಿರ್ದಿಷ್ಟ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಕೈಗೊಂಡ ಕ್ರಮವಲ್ಲ; ಮುನ್ನೆಚ್ಚರಿಕೆಯ ಕ್ರಮ ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ವಿಮಾನ ಅಸುರಕ್ಷಿತ ಎಂಬ ವರದಿಗಳನ್ನು ಶ್ವೇತಭವನ ತಳ್ಳಿಹಾಕಿದೆ. ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್, ಹೊಸ ವಿಮಾನದಲ್ಲಿ "ಅತ್ಯುನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳು" ಅಳವಡಿಸಲಾಗಿದ್ದು, ಅಧ್ಯಕ್ಷರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು, ಅಗತ್ಯವಿದ್ದರೆ ಗೊಂದಲ ಸೃಷ್ಟಿಸುವ ಮತ್ತು ದಿಕ್ಕು ತಪ್ಪಿಸುವ ತಂತ್ರಗಳನ್ನೂ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ಭದ್ರತಾ ಆತಂಕವೇ ವಿಮಾನ ಬದಲಾವಣೆಗೆ ಕಾರಣ ಎಂಬ ವರದಿಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ಯುಕೆಯಿಂದ ನಿರ್ಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಯಾವಾಗಲೂ ಬೆದರಿಕೆ ಇರುತ್ತದೆ. ನಾನು ಅವರ ಗುರಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತೇನೆ" ಎಂದು ಹೇಳಿದ್ದಾರೆ.
ʼದಿ ಇಂಡಿಪೆಂಡೆಂಟ್ʼ ವರದಿ ಪ್ರಕಾರ, ಆರ್‌ಎಎಫ್ ಮಿಲ್ಡೆನ್‌ಹಾಲ್‌ನಲ್ಲಿ ಹೊಸ ವಿಮಾನವನ್ನು ನಿಲ್ಲಿಸಿದ್ದ ಉದ್ದೇಶ ಅಲ್ಲಿದ್ದ ಅಮೆರಿಕದ ಸೇನಾ ಸಿಬ್ಬಂದಿಗೆ ಅದನ್ನು ವೀಕ್ಷಿಸಲು ಅವಕಾಶ ಕಲ್ಪಿಸುವುದಾಗಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ. ಬಳಿಕ ಹೊಸ ಜೆಟ್ ಸುತ್ತ ನೆರೆದಿದ್ದ ಸೇನಾ ಸಿಬ್ಬಂದಿಯ ಚಿತ್ರಗಳನ್ನು ಹಂಚಿಕೊಂಡ ಅವರು, ಅದನ್ನು "ಸಂಪೂರ್ಣ ಹೊಸದು ಮತ್ತು ಅತ್ಯಂತ ಅದ್ಭುತ" ಎಂದು ಬಣ್ಣಿಸಿದ್ದಾರೆ. ಅದನ್ನು ನೋಡಲು ಸೇನಾ ಸಿಬ್ಬಂದಿ ಅತ್ಯಂತ ಉತ್ಸುಕರಾಗಿದ್ದರು ಎಂದೂ ಹೇಳಿದ್ದಾರೆ.
ಇದೇ ವೇಳೆ, "ಹಳೆಯ ದಿನಗಳ ನೆನಪಿಗಾಗಿ" ಹಳೆಯ ಏರ್ ಫೋರ್ಸ್ ಒನ್‌ನಲ್ಲಿ ಪ್ರಯಾಣಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ. ಹಾರಾಟದ ವೇಳೆ ವರದಿಗಾರರಿಗೆ ವಿಮಾನದ ಕಿಟಕಿಗಳ ಪರದೆಗಳನ್ನು ಮುಚ್ಚಿಡುವಂತೆ ಸೂಚಿಸಲಾಗಿತ್ತು. ಆದರೆ ಈ ನಿಯಮ ತಮಗೆ ಅನ್ವಯಿಸಲಿಲ್ಲ ಎಂದು ಹೇಳಿದ ಅವರು, "ಇಲ್ಲಿರುವ ದುಷ್ಟರ ಕಾರಣದಿಂದ" ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ಇರಾನ್ ಗೆ ಪರೋಕ್ಷ ಉಲ್ಲೇಖ ಎಂದು ವಿಶ್ಲೇಷಿಸಲಾಗಿದೆ.
ಈ ಬೆಳವಣಿಗೆಗಳು ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ನಡೆದಿವೆ. ಹಾರ್ಮುಝ್ ಜಲಸಂಧಿ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ, ಇರಾನ್‌ನ ಹಲವು ಗುರಿಗಳ ಮೇಲೆ ಹೊಸದಾಗಿ ವಾಯುದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ಬೆಳವಣಿಗೆಯ ನಡುವೆ ಬಹ್ರೇನ್, ಕುವೈತ್ ಮತ್ತು ಖತರ್ ನಲ್ಲಿ ಕ್ಷಿಪಣಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ. ಕುವೈತ್ ಸೇನೆ ಒಳನುಗ್ಗಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದಿರುವುದಾಗಿ ತಿಳಿಸಿದೆ.