ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: Amazon ತನ್ನ ಸಾಧನಗಳ ಘಟಕದಲ್ಲಿ 250 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಿಂಡಲ್ ಇ-ರೀಡರ್‌ ಗಳು ಮತ್ತು ಎಕೋ ಸ್ಮಾರ್ಟ್ ಸ್ಪೀಕರ್‌ ಗಳಂತಹ ಉತ್ಪನ್ನಗಳ ಅಭಿವೃದ್ಧಿಯ ಹೊಣೆ ಹೊತ್ತಿರುವ ಈ ಘಟಕದಲ್ಲಿ ನಡೆದ ಉದ್ಯೋಗ ಕಡಿತವು ಮುಖ್ಯವಾಗಿ ಸಾಫ್ಟ್‌ವೇರ್ ಅಭಿವೃದ್ಧಿ ವಿಭಾಗದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಉದ್ಯೋಗ ಕಡಿತದ ಬಗ್ಗೆ Amazon ಮುಂಜಾನೆ ಇಮೇಲ್ ಸಂದೇಶಗಳ ಮೂಲಕ ಮಾಹಿತಿ ನೀಡಿದೆ. ಕಂಪೆನಿಯ ಉಪಾಧ್ಯಕ್ಷೆ ಚೆರಿ ರಾಬಿನ್ಸನ್ ಅವರು ಕಳುಹಿಸಿದ ಇಮೇಲ್‌ ನಲ್ಲಿ, ಸಂಸ್ಥೆಯ ರಚನೆಯ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಉದ್ಯೋಗ ಕಡಿತದ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗಿಗಳನ್ನು ವಜಾಗೊಳಿಸುವ ಕುರಿತು ಮುಂಜಾನೆ ಇಮೇಲ್ ಮೂಲಕ ಮಾಹಿತಿ ನೀಡುವುದು ಹೊಸತೇನಲ್ಲ. ಈ ಹಿಂದೆ Meta ಮತ್ತು Oracle‌ನಂತಹ ಕಂಪೆನಿಗಳೂ ಇದೇ ರೀತಿಯಲ್ಲಿ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದವು.

Amazon ವಕ್ತಾರರು ಉದ್ಯೋಗ ಕಡಿತವನ್ನು ದೃಢಪಡಿಸಿದ್ದಾರೆ. ‘ಕೆಲವು ಹುದ್ದೆಗಳನ್ನು ರದ್ದುಗೊಳಿಸುವ ಕಠಿಣ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಆದರೆ, ಎಷ್ಟು ಹುದ್ದೆಗಳು ರದ್ದಾಗಿವೆ ಎಂಬುದನ್ನು ಕಂಪೆನಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ರಾಯಿಟರ್ಸ್ ವರದಿಯಲ್ಲಿ 250 ಉದ್ಯೋಗಿಗಳ ವಜಾದ ಬಗ್ಗೆ ಉಲ್ಲೇಖಿಸಲಾಗಿದೆ.

AI ಯುಗಕ್ಕೆ ಹೊಂದಿಕೊಳ್ಳುವ ಸವಾಲು

ಉದ್ಯೋಗ ಕಡಿತದಿಂದ Amazon ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ತನ್ನ ಉತ್ಪನ್ನಗಳ ಅಭಿವೃದ್ಧಿ ಯೋಜನೆಗಳಿಗೆ ಅನುಗುಣವಾಗಿ ಕಾರ್ಯಾಚರಣೆಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಉದ್ಯೋಗ ಕಡಿತದ ನಿರ್ಧಾರ ಪ್ರಕಟವಾಗುವುದಕ್ಕೆ ಒಂದು ದಿನ ಮೊದಲು, AI ಯುಗದಲ್ಲಿ ಸಾಫ್ಟ್‌ವೇರ್ ಡೆವಲಪರ್‌ ಗಳ ಪಾತ್ರದ ಕುರಿತು Amazon‌ನ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಸೆಪ್ಟೆಂಬರ್‌ ನಲ್ಲಿ ಕಳುಹಿಸಿದ್ದ ಆಂತರಿಕ ಜ್ಞಾಪಕ ಪತ್ರವನ್ನು ಕಂಪೆನಿ ಬಹಿರಂಗಪಡಿಸಿತ್ತು.

‘ನಾವೆಲ್ಲರೂ ಈ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕು ಮತ್ತು ಕಲಿಯಲು ಸಮಯ ಮೀಸಲಿಡಬೇಕು. ಇಲ್ಲದಿದ್ದರೆ, ಹಿಂದೆ ಉಳಿಯುವ ಅಪಾಯವಿದೆ’ ಎಂದು ಆ ಪತ್ರದಲ್ಲಿ ಎಚ್ಚರಿಸಲಾಗಿತ್ತು. ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ AI ಪ್ರಮುಖ ಪಾತ್ರ ವಹಿಸಲಿದೆ ಎಂದೂ ತಿಳಿಸಲಾಗಿತ್ತು.

ಮರುವಿನ್ಯಾಸಗೊಳಿಸಲಾದ Echo Show 16 ಸ್ಮಾರ್ಟ್ ಡಿಸ್‌ಪ್ಲೇ, Alexa ಫೋಟೊ ಫ್ರೇಮ್ ಮತ್ತು Echo Time ಬೆಡ್‌ಸೈಡ್ ಗಡಿಯಾರ ಸೇರಿದಂತೆ Alexa ತಂತ್ರಜ್ಞಾನ ಆಧಾರಿತ ಐದು ಹೊಸ ಉತ್ಪನ್ನಗಳನ್ನು Amazon ಘೋಷಿಸಿದ ದಿನವೇ ಉದ್ಯೋಗ ಕಡಿತ ನಡೆದಿದೆ. ಈ ಉತ್ಪನ್ನಗಳನ್ನು ಕಂಪೆನಿಯ ಒಳಗೇ ಅಭಿವೃದ್ಧಿಪಡಿಸಲಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಅಲೆ

Amazon‌ನ ಇತ್ತೀಚಿನ ಉದ್ಯೋಗ ಕಡಿತವು ತನ್ನ ಪ್ರಮುಖ ಚಿಲ್ಲರೆ ವ್ಯಾಪಾರ ವಿಭಾಗದಲ್ಲಿ ಸುಮಾರು 1,000 ಹುದ್ದೆಗಳನ್ನು ಕಡಿತಗೊಳಿಸುವ ನಿರ್ಧಾರದ ಬಳಿಕ ನಡೆದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 14,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಕಂಪೆನಿ, ಈ ವರ್ಷದ ಜನವರಿಯಲ್ಲಿ ಮತ್ತಷ್ಟು 16,000 ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು.

ಇನ್ನೊಂದೆಡೆ, Amazon AI ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಈ ವರ್ಷ AI ಕ್ಷೇತ್ರದಲ್ಲಿ ಕಂಪೆನಿ 220 ಶತಕೋಟಿ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ.

Layoffs.fyi ದತ್ತಾಂಶದ ಪ್ರಕಾರ, ಈ ವರ್ಷವೊಂದರಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ 1.35 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಇತ್ತೀಚೆಗೆ Dropbox ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ. 9ರಷ್ಟು ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು.

ಮತ್ತೊಂದೆಡೆ, Microsoft ಸುಮಾರು 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತವಾಗಿ ಕೆಲಸ ತೊರೆಯುವ ಆಯ್ಕೆಯನ್ನು ನೀಡಿದೆ. ಇದು ಕಂಪೆನಿಯ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ನಾಲ್ಕನೇ ಒಂದು ಭಾಗಕ್ಕೆ ಸಮಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor