‘ನಾನೇ ಬ್ರೆಝಿಲ್ ನ ಚುನಾಯಿತ ಅಧ್ಯಕ್ಷ’: ಪರಾಜಿತ ಅಭ್ಯರ್ಥಿ ಫ್ಲಾವಿಯೊ ಬೊಲ್ಸೊನಾರೊ ಘೋಷಣೆ
ಫ್ಲಾವಿಯೊ ಬೊಲ್ಸೊನಾರೊ |Photo Credit : PTI
ನ್ಯೂಯಾರ್ಕ್: ಅಧಿಕಾರದಲ್ಲಿರುವ ಲೂಯಿಜ್ ಇನಾಸಿಯೊ ಲೂಲಾ ಡಾ ಸಿಲ್ವಾ ವಂಚನೆ, ಅಕ್ರಮದ ಮೂಲಕ ಗೆದ್ದಿದ್ದಾರೆ ಎಂದು ಆರೋಪಿಸಿರುವ ಬ್ರೆಝಿಲ್ನ ಪರಾಜಿತ ಅಧ್ಯಕ್ಷೀಯ ಅಭ್ಯರ್ಥಿ ಫ್ಲಾವಿಯೊ ಬೊಲ್ಸೊನಾರೊ, ತಾವೇ ದೇಶದ ಕಾನೂನುಬದ್ಧ ಅಧ್ಯಕ್ಷ ಎಂದು ಅಮೆರಿಕಕ್ಕೆ ತಲುಪಿದ ನಂತರ ಪ್ರತಿಪಾದಿಸಿದ್ದಾರೆ.
`ನಾನೇ ಆಯ್ಕೆಯಾದ ಅಧ್ಯಕ್ಷ, ಮತ್ತು ಬ್ರೆಜಿಲ್ ಚುನಾವಣೆಯನ್ನು ಕದ್ದ ಅಪರಾಧಿಗಳು ಸರ್ವಾಧಿಕಾರವನ್ನು ಸ್ಥಾಪಿಸಿದ ಅಪರಾಧ ಸಂಸ್ಥೆಯ ಭಾಗವಾಗಿದ್ದಾರೆ ಎಂದು ಗುರುವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಬಳಿಕ ಮತ್ತೊಂದು ಪೋಸ್ಟ್ನಲ್ಲಿ ಅವರು ತಮ್ಮನ್ನು ದೇಶದ ವಿರೋಧ ಪಕ್ಷದ ನಾಯಕ ಎಂದು ಕರೆದುಕೊಂಡರು. `ನಾನು ಇಲ್ಲಿಂದಲೇ ವಿರೋಧ ಪಕ್ಷವನ್ನು ಮುನ್ನಡೆಸುತ್ತೇನೆ' ಎಂದು ಬೊಲ್ಸೊನಾರೊ ಸೇರಿಸಿದರು.
45 ವರ್ಷದ ಬೊಲ್ಸೊನಾರೊ ಬುಧವಾರ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಖಾಸಗಿ ಜೆಟ್ನಲ್ಲಿ ಮಿಯಾಮಿ ಸಮೀಪದ ಒಪಾ-ಲಾಕಾ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದರು. ಅನ್ವಯವಾಗುವ ವಲಸೆ ನಿಯಮಗಳ ಅಡಿಯಲ್ಲಿ ಅವರ ಕುಟುಂಬಕ್ಕೆ ಅನುಮತಿ ನೀಡಲಾಗಿದೆ ಎಂದು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿದೆ.
ಬೊಲ್ಸೊನಾರೊ ಮತ್ತು ಅವರ ತಂದೆ, ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರೆಝಿಲ್ ಚುನಾವಣೆಯನ್ನು `ಬಹಳ ವಿಚಿತ್ರ' ಎಂದು ಕರೆದಿದ್ದಾರೆ. ಆದರೆ, ಫ್ಲಾವಿಯೊ ಬೊಲ್ಸೊನಾರೊ ಅವರ ಅಧ್ಯಕ್ಷೀಯ ಹಕ್ಕು ಸಾಧನೆಯಲ್ಲಿ ತಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದರು. ಬೊಲ್ಸೊನಾರೊ ಅವರನ್ನು ತಲೆಮರೆಸಿಕೊಂಡ ವ್ಯಕ್ತಿಯೆಂದು ಪರಿಗಣಿಸಲಾಗಿಲ್ಲ ಎಂದು ಬ್ರೆಜಿಲ್ ಪೊಲೀಸರು ತಿಳಿಸಿದ್ದಾರೆ. ತಮ್ಮ ಪಾಸ್ಪೋರ್ಟ್ಗಳನ್ನು ಒಪ್ಪಿಸುವಂತೆ ಆದೇಶವಿದ್ದರೂ, ಬೊಲ್ಸೊನಾರೊ ಅಜೆರ್ಂಟೀನಾ ಮತ್ತು ಈಕ್ವೆಡಾರ್ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.