Photo Credit : Aljazeera

ಟೆಲ್ ಅವೀವ್: ದೇಶದ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಶಂಕೆಗಳು ಹಾಗೂ ಮತದಾನದ ಮೇಲೆ ಅನುಚಿತ ಪ್ರಭಾವ ಬೀರಲು ವಿದೇಶಿ ಹಣವನ್ನು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಇಸ್ರೇಲ್‍ನ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷ ನೋಮ್ ಸೋಲ್ಬರ್ಗ್ ಅವರು, ಇಸ್ರೇಲ್‍ನ ಆಂತರಿಕ ಭದ್ರತಾ ಸಂಸ್ಥೆ `ಶಿನ್ ಬೆಟ್‍ಮುಖ್ಯಸ್ಥ ಡೇವಿಡ್ ಝಿನಿಗೆ ಸೂಚಿಸಿದ್ದಾರೆ ಎಂದು `ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.

ಇಸ್ರೇಲ್‍ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯನ್ನು ಖತರ್, ತುರ್ಕಿಯೆ ಮತ್ತು ಅರಬ್ ದೇಶಗಳು `ದೋಚಿವೆ' ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಯಾಯ್ರ್ ನೆತನ್ಯಾಹು ಪ್ರತಿಪಾದಿಸಿದ ನಂತರ ದೇಶದಲ್ಲಿ ಹೊಸ ರಾಜಕೀಯ ವಿವಾದ ಭುಗಿಲೆದ್ದಿದೆ.

ಇಸ್ರೇಲ್‍ನ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವ ಬಾಹ್ಯ ವ್ಯಕ್ತಿಗಳು/ಸಂಸ್ಥೆಗಳು ಒದಗಿಸಿದ ವಿದೇಶಿ ಧನಸಹಾಯದ ಮೂಲಕ ಅನುಚಿತ ಪ್ರಭಾವ ಬೀರಲಾಗಿದೆ. ಇದು ಚುನಾವಣೆ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಹೊಂದಿತ್ತು ಎಂಬ ಗಂಭೀರ ಆರೋಪಗಳು ತಮ್ಮ ಗಮನಕ್ಕೆ ಬಂದಿವೆ. ಈ ಸಂಶಯವು ಖತರ್‌ನ ಹಣಕಾಸಿನ ನೆರವಿಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿನ ಕೆಲವು ಹಣವನ್ನು ಹಿಂದೆ ಭಯೋತ್ಪಾದನೆಗೆ ಹಣ ರವಾನಿಸಲು ಬಳಸಲಾಗಿದ್ದ ಮಾರ್ಗಗಳ ಮೂಲಕವೇ ರವಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಚುನಾವಣೆಗಳ ಪವಿತ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಥವಾ ದೇಶದ್ರೋಹವನ್ನು ಪ್ರಚೋದಿಸುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಇವುಗಳನ್ನು ಸಮಗ್ರವಾಗಿ ತನಿಖೆ ಮಾಡುವುದು ಅತ್ಯಗತ್ಯ ಎಂದು ನ್ಯಾಯಾಧೀಶರು ಝಿನಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಮಧ್ಯೆ, ಚುನಾವಣೆಯಲ್ಲಿ ಹಸ್ತಕ್ಷೇಪದ ಆರೋಪವನ್ನು ಖತರ್ ನಿರಾಕರಿಸಿದೆ.

ಇಸ್ರೇಲ್‍ನ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿರುವ ಬೆಂಜಮಿನ್ ನೆತನ್ಯಾಹು

ಬಲಪಂಥೀಯ ಒಕ್ಕೂಟವು ಸಂಸತ್ತಿನ ಬಹುಮತವನ್ನು ಕಳೆದುಕೊಂಡಿದ್ದರೂ, ಇಸ್ರೇಲ್‍ನ ಉಸ್ತುವಾರಿ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು ಮುಂದುವರಿಯುವುದು ಖಚಿತವಾಗಿದೆ.

ಮತಗಳ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು ನೆತನ್ಯಾಹು ಅವರ ಬಲಪಂಥೀಯ, ತೀವ್ರ-ಬಲಪಂಥೀಯ ಮತ್ತು ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳ ಒಕ್ಕೂಟವು 120 ಸ್ಥಾನಗಳ ಸಂಸತ್ತಿನಲ್ಲಿ 53 ಸ್ಥಾನಗಳನ್ನು, ಎದುರಾಳಿ ಗಾಡಿ ಐಸೆನ್‍ಕೋಟ್ ಅವರ ವಿರೋಧ ಪಕ್ಷದ ಒಕ್ಕೂಟ 48 ಸ್ಥಾನಗಳನ್ನು, ಅರಬ್ ಪಕ್ಷಗಳು 19 ಸ್ಥಾನಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಎಣಿಕೆ ಮುಂದುವರಿದಂತೆ ಅಂತಿಮ ಫಲಿತಾಂಶಗಳು ಬದಲಾಗಬಹುದು. ಯಾವುದೇ ಮೈತ್ರಿಕೂಟ ರಚನೆಯಾಗುವವರೆಗೆ ಅಥವಾ ಮುಂದಿನ ವರ್ಷ ಮತ್ತೊಂದು ಚುನಾವಣೆ ನಡೆಯುವವರೆಗೆ ನೆತನ್ಯಾಹು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಉಸ್ತುವಾರಿ ಸರಕಾರವು ಕೆಲವು ಮಿತಿಗಳನ್ನು ಎದುರಿಸುತ್ತದೆಯಾದರೂ, ಇರಾನ್‍ನೊಂದಿಗಿನ ಯುದ್ಧದ ಮೇಲಿನ ಅಧಿಕಾರ ಸೇರಿದಂತೆ ಪ್ರಮುಖ ಹಕ್ಕುಗಳನ್ನು ಕಾಯ್ದುಕೊಳ್ಳುತ್ತದೆ ಎಂದು ತಜ್ಞರು ಹೇಳಿದ್ದಾರೆ.

ನೆತನ್ಯಾಹು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂಬುದನ್ನು ಐಸೆನ್‍ಕೋಟ್ ಒಪ್ಪಿಕೊಂಡಿದ್ದಾರೆ. ಆದರೆ ನೆತನ್ಯಾಹು ನೆತನ್ಯಾಹು ಜನಾದೇಶ ಅಥವಾ ಜನರ ನಂಬಿಕೆ ಇಲ್ಲದ ಉಸ್ತುವಾರಿ ಪ್ರಧಾನಿ. ಅವರು ರಾಜಕೀಯ ಲಾಭಕ್ಕಾಗಿ ಭದ್ರತೆಯನ್ನು ಬಳಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಫಲಿತಾಂಶ ವಿಳಂಬಗೊಳಿಸುವ ತಂತ್ರ: ಐಸೆನ್‍ಕೋಟ್ ಆರೋಪ

ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಆರೋಪಗಳನ್ನು ಬಳಸಿಕೊಂಡು ಫಲಿತಾಂಶಗಳನ್ನು ಬುಡಮೇಲು ಮಾಡಲು ಮತ್ತು ಇಸ್ರೇಲ್ ಸಂಸತ್ತು ಪದಗ್ರಹಣವನ್ನು ವಿಳಂಬಗೊಳಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‍ಕೋಟ್ ಗುರುವಾರ ಆರೋಪಿಸಿದ್ದಾರೆ.

ಚುನಾವಣೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಶಂಕೆಗಳ ಬಗ್ಗೆ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಗೆ ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಧೃಡಪಡಿಸದ ಆರೋಪಗಳನ್ನು ಬಳಸಿಕೊಂಡು ಫಲಿತಾಂಶಗಳ ಸಿಂಧುತ್ವವನ್ನು ಪ್ರಶ್ನಿಸುವುದರ ವಿರುದ್ಧ ಎಚ್ಚರಿಸಿದ್ದಾರೆ.

ಸತ್ಯವನ್ನು ಸುಳ್ಳುಗಳು, ಮಾನಸಿಕ ತಂತ್ರಗಳು ಮತ್ತು ಗೊಂದಲ ಸೃಷ್ಟಿಸುವ ಮೂಲಕ ಎದುರಿಸಲು ಅಭ್ಯಾಸ ಮಾಡಿಕೊಂಡಿರುವ ನೆತನ್ಯಾಹು, ತಮ್ಮ ಸಹಚರರೊಂದಿಗೆ ಸೇರಿ ಇಸ್ರೇಲಿ ಸಾರ್ವಜನಿಕರ ಮೇಲೆ ಕಾನೂನುಬಾಹಿರ ಪ್ರಭಾವ ಬೀರುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಚುನಾವಣಾ ಫಲಿತಾಂಶಗಳನ್ನು ವಿಳಂಬಗೊಳಿಸುವುದು ಇದರ ಉದ್ದೇಶವಾಗಿದೆ. ಇಸ್ರೇಲ್‍ನ ಸಾರ್ವಜನಿಕರು ವಿಫಲ ಸರಕಾರಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಈ ಅಧಿಕೃತ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು, ಇನ್ನೂ ಸಂಪೂರ್ಣವಾಗಿ ತನಿಖೆಯಾಗದ ಹಾಗೂ ಆರೋಪಗಳ ವಿವರ ಮತ್ತು ವ್ಯಾಪ್ತಿ ಸ್ಪಷ್ಟವಾಗದ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು' ಎಂದು ಐಸೆನ್‍ಕೋಟ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor