Photo: PTI

ಹೊಸದಿಲ್ಲಿ: ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಭಾರತವು ಇರಾನ್ ಮತ್ತು ವೆನೆಝುವೆಲಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ರಷ್ಯಾದಿಂದಲೂ ತೈಲ ಖರೀದಿಯನ್ನು ಕಡಿಮೆ ಮಾಡುವಂತೆ ಅಮೆರಿಕದ ಅಧಿಕಾರಿಗಳು ಸೂಚಿಸಿದ್ದರು ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಅಮೆರಿಕದಲ್ಲಿ ಭಾರತದ ಮಾಜಿ ರಾಯಭಾರಿ ಹರ್ಷ ಶೃಂಗ್ಲಾ ಹೇಳಿದ್ದಾರೆ.

'ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್' (ASPI) ಅಕ್ಟೋಬರ್ 6ರಂದು ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಶೃಂಗ್ಲಾ, ಜೋ ಬೈಡನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ರಾಜತಾಂತ್ರಿಕರೊಬ್ಬರು ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವಂತೆ ಸೂಚಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಇರಾನ್‌ ನಿಂದ ತೈಲ ಆಮದು ನಿಲ್ಲಿಸುವಂತೆ ಅಮೆರಿಕ ಒತ್ತಡ ಹೇರಿದ್ದರಿಂದ ಭಾರತವು ದೊಡ್ಡ ಪ್ರಯತ್ನದ ಬಳಿಕ ಆ ನಿರ್ಧಾರ ಕೈಗೊಂಡಿತ್ತು. ಬಳಿಕ ವೆನೆಝುವೆಲಾದಿಂದಲೂ ತೈಲ ಖರೀದಿ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಈಗ ರಷ್ಯಾದ ತೈಲ ಖರೀದಿಯನ್ನೂ ನಿಲ್ಲಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಶೃಂಗ್ಲಾ ಅವರ ಹೇಳಿಕೆಯ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಅಕ್ಟೋಬರ್ 28ರಂದು 'ಎಕ್ಸ್' ವೇದಿಕೆಯಲ್ಲಿ ವೀಡಿಯೊ ಹಂಚಿಕೊಂಡ ಅವರು, ತಮ್ಮ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆದು ಪ್ರಸ್ತುತಪಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಭಾರತದ ಇಂಧನ ಭದ್ರತೆಯ ಹಿತದೃಷ್ಟಿಯಿಂದ ತಾವು ಮಾತನಾಡಿದ್ದಾಗಿ ಹೇಳಿದ ಅವರು, ಕಾಂಗ್ರೆಸ್ ಪಕ್ಷವು 'ಮತ್ತೊಂದು ಸುಳ್ಳು ನಿರೂಪಣೆ'ಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ತಮ್ಮ ಹೇಳಿಕೆಯನ್ನು ಹಿಂಪಡೆದಿಲ್ಲ.

ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮುಂದೆ ಶರಣಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಆರೋಪಿಸಿದ್ದಾರೆ.

ಇರಾನ್ ತೈಲದ ಮೇಲಿನ ಅವಲಂಬನೆ ಕಡಿತಕ್ಕೆ ಒತ್ತಡ

ವಾಷಿಂಗ್ಟನ್ ಡಿಸಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಅವಧಿಯಲ್ಲಿ ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳಿಂದ ವಿನಾಯಿತಿ ಪಡೆಯುವುದು ಅಲ್ಲಿನ ಅಧಿಕಾರಿಗಳೊಂದಿಗಿನ ಮಾತುಕತೆಯ ಪ್ರಮುಖ ವಿಷಯವಾಗಿತ್ತು ಎಂದು ಶೃಂಗ್ಲಾ ತಿಳಿಸಿದ್ದಾರೆ.

'ಭಾರತ ಸೇರಿದಂತೆ ಕೆಲವು ದೇಶಗಳಿಗೆ ಅಮೆರಿಕದ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿತ್ತು. ಏಕೆಂದರೆ, ನಾವು ಇರಾನ್‌ ನಿಂದ ತೈಲ ಆಮದು ಮಾಡಿಕೊಳ್ಳುವುದರ ಮೇಲೆ ಹೆಚ್ಚು ಅವಲಂಬಿತರಾಗಿದ್ದೆವು. ನಮ್ಮ ಅನೇಕ ತೈಲ ಸಂಸ್ಕರಣಾಗಾರಗಳು ಇರಾನ್‌ ನ ಕಚ್ಚಾ ತೈಲವನ್ನು ಸಂಸ್ಕರಿಸಲು ಸೂಕ್ತವಾಗಿದ್ದವು' ಎಂದು ಅವರು ಹೇಳಿದ್ದಾರೆ.

ಆದರೆ, ಒಂದು ಹಂತದಲ್ಲಿ ಅಮೆರಿಕವು ಈ ವಿನಾಯಿತಿಗಳನ್ನು ಹಿಂತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ.

'ನಾನು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಬೈಡನ್ ಆಡಳಿತದ ಅವಧಿಯಲ್ಲಿ ಅಮೆರಿಕದ ಅಧಿಕಾರಿಯೊಬ್ಬರು ದಿಲ್ಲಿಗೆ ಬಂದಿದ್ದರು. ನಾವು ರಷ್ಯಾದಿಂದ ತೈಲ ಖರೀದಿಸುವುದನ್ನು ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದರು. ಆಗ ನಾನು, ಇರಾನ್‌ ನ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ದೊಡ್ಡ ಪ್ರಯತ್ನ ಮಾಡಿತ್ತು. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಇರಾನ್‌ ನಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದ್ದೆವು ಎಂದು ತಿಳಿಸಿದೆ' ಎಂದು ಶೃಂಗ್ಲಾ ವಿವರಿಸಿದ್ದಾರೆ.

'ಇಂದು ನಾವು ಇರಾನ್‌ ನಿಂದ ಯಾವುದೇ ತೈಲ ಖರೀದಿಸುತ್ತಿಲ್ಲ. ಪೂರೈಕೆಯ ಕೊರತೆ ಉಂಟಾಗಬಹುದಾದ ಪರಿಸ್ಥಿತಿಯನ್ನು ಗಮನಿಸಿದರೆ, ಇದು ಒಳ್ಳೆಯದೇ ಆಯಿತು ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ವೆನೆಝುವೆಲಾದಲ್ಲಿ 6 ಶತಕೋಟಿ ಡಾಲರ್ ಹೂಡಿಕೆ

ವೆನೆಝುವೆಲಾದಿಂದಲೂ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕ ಸೂಚಿಸಿತ್ತು ಎಂದು ಶೃಂಗ್ಲಾ ಹೇಳಿದ್ದಾರೆ.

'ವೆನೆಝುವೆಲಾದ ಮೂಲಸೌಕರ್ಯಗಳಲ್ಲಿ ನಾವು 6 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದೆವು. ಹೀಗಿರುವಾಗ ಅಲ್ಲಿಂದ ತೈಲ ಖರೀದಿ ನಿಲ್ಲಿಸುವಂತೆ ಹೇಳಿದ್ದೇಕೆ ಎಂದು ನಾವು ಪ್ರಶ್ನಿಸಿದ್ದೆವು. ಈಗ ರಷ್ಯಾದ ತೈಲ ಖರೀದಿಯನ್ನೂ ನಿಲ್ಲಿಸುವಂತೆ ಹೇಳಲಾಗುತ್ತಿದೆ. ನಮ್ಮ ಮೇಲೆ ಸುಮಾರು 150 ಶತಕೋಟಿ ಡಾಲರ್‌ ನಷ್ಟು ಹೊಣೆಗಾರಿಕೆ ಇದೆ' ಎಂದು ಅವರು ತಿಳಿಸಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಹಾಗೂ ಏಷ್ಯಾ ಸೊಸೈಟಿಯ ಜಾಗತಿಕ ಅಧ್ಯಕ್ಷ ಮತ್ತು ಸಿಇಒ ಕೆವಿನ್ ರಡ್ಡ್, ಅಮೆರಿಕದ ಟೆಕ್ಸಾಸ್‌ ನಿಂದ ತೈಲ ಖರೀದಿಸುವ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶೃಂಗ್ಲಾ, ಭಾರತವು ಅಮೆರಿಕದಿಂದ ಇಂಧನ ಖರೀದಿಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ನೈಜೀರಿಯಾ, ವೆನೆಝುವೆಲಾ, ಆಸ್ಟ್ರೇಲಿಯಾ, ಬ್ರೆಝಿಲ್ ಮತ್ತು ಗಯಾನಾದಿಂದಲೂ ತೈಲ ಖರೀದಿಸುವ ಮೂಲಕ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸಲಾಗಿದೆ. ಅಮೆರಿಕದಿಂದ ತೈಲ ಖರೀದಿ ಹೆಚ್ಚಿರುವುದು ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ನೆರವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾದ ತೈಲ ಖರೀದಿ ನಿಲ್ಲಿಸಿದರೆ ಜಾಗತಿಕ ಬಿಕ್ಕಟ್ಟು?

2023, 2024, 2025 ಮತ್ತು 2026ರ ಕೆಲವು ಅವಧಿಗಳಲ್ಲಿ ಭಾರತದ ಒಟ್ಟು ತೈಲ ಆಮದಿನ ಶೇಕಡಾ 50ರಷ್ಟು ರಷ್ಯಾದಿಂದ ಬರುತ್ತಿತ್ತು ಎಂದು ಶೃಂಗ್ಲಾ ಹೇಳಿದ್ದಾರೆ.

'ಭಾರತವು ಪ್ರತಿದಿನ 2 ದಶಲಕ್ಷ ಬ್ಯಾರೆಲ್‌ ಗಿಂತಲೂ ಹೆಚ್ಚು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಗಂಭೀರ ಪರಿಣಾಮ ಉಂಟಾಗಬಹುದು. ಇಂಧನ ಬೆಲೆಗಳು ಗಗನಕ್ಕೇರಬಹುದು. ಭಾರತದಲ್ಲಿ ಹಣದುಬ್ಬರವೂ ಹೆಚ್ಚಬಹುದು. ಜಾಗತಿಕ ಇಂಧನ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ' ಎಂದು ಅವರು ಎಚ್ಚರಿಸಿದ್ದಾರೆ.

ಕೆಪ್ಲರ್‌ ನ ಹಡಗುಗಳ ಚಲನವಲನದ ದತ್ತಾಂಶದ ಪ್ರಕಾರ, ಭಾರತದ ರಷ್ಯಾದ ಕಚ್ಚಾ ತೈಲ ಆಮದು ಜುಲೈ ಮತ್ತು ಸೆಪ್ಟೆಂಬರ್ ನಡುವೆ ಶೇಕಡಾ 29ರಷ್ಟು ಕುಸಿದಿದೆ. ದಿನಕ್ಕೆ ಸುಮಾರು 2.57 ಮಿಲಿಯನ್ ಬ್ಯಾರೆಲ್‌ ಗಳಷ್ಟಿದ್ದ ಆಮದು 1.82 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿದಿದೆ ಎಂದು ಅಕ್ಟೋಬರ್ 21ರಂದು ಪ್ರಕಟವಾದ ದತ್ತಾಂಶ ತಿಳಿಸಿದೆ.

ಟ್ರಂಪ್ ಆಡಳಿತದೊಂದಿಗೆ ವ್ಯವಹರಿಸುವುದು ಕಠಿಣವಾಗಿದೆ ಎಂದು ಕೆವಿನ್ ರಡ್ಡ್ ಅಭಿಪ್ರಾಯಪಟ್ಟಿದ್ದಾರೆ. ಈ ಸವಾಲು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ; ಇತರ ದೇಶಗಳೂ ಇದನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ತೈಲ ಖರೀದಿದಾರರಿಗೆ ಶೇ. 100ರಷ್ಟು ಸುಂಕದ ಪ್ರಸ್ತಾಪ

ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 100ರವರೆಗೆ ಸುಂಕ ವಿಧಿಸಲು ಅವಕಾಶ ಕಲ್ಪಿಸುವ ಲಿಂಡ್ಸೆ ಗ್ರಹಾಂ ಅವರ ರಷ್ಯಾ ಮತ್ತು ಇರಾನ್ ಕಾಯ್ದೆಯ ಬಗ್ಗೆಯೂ ಚರ್ಚೆಯಲ್ಲಿ ಪ್ರಸ್ತಾಪವಾಗಿದೆ.

ಟ್ರಂಪ್ ಆಡಳಿತ ಆರಂಭವಾದ ಬಳಿಕ ಸುಂಕದ ವಿಷಯವು ಅಮೆರಿಕ–ಭಾರತ ಸಂಬಂಧಗಳಲ್ಲಿ ಪ್ರಮುಖ ಅಂಶವಾಗಿದೆ ಎಂದು ಶೃಂಗ್ಲಾ ಹೇಳಿದ್ದಾರೆ. ಉಭಯ ದೇಶಗಳ ಸಂಬಂಧಗಳ ಮೇಲೆ ಹಲವು 'ಡ್ಯಾಮೋಕ್ಲಿಸ್‌ ನ ಕತ್ತಿಗಳು' ತೂಗುತ್ತಿರುವಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ 23ರಂದು ಹೊರಡಿಸಿದ ಕಾರ್ಯಕಾರಿ ಆದೇಶದ ಮೂಲಕ ಭಾರತಕ್ಕೆ ಪ್ರಸ್ತಾವಿತ ದಂಡನಾತ್ಮಕ ಸುಂಕಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದಾರೆ. ಆದರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ರಷ್ಯಾದ ತೈಲಕ್ಕೆ ಪರ್ಯಾಯವಾಗಿ ಟೆಕ್ಸಾಸ್‌ ನ ಲಘು ಕಚ್ಚಾ ತೈಲ ಮತ್ತು ವೆನೆಝುವೆಲಾದ ಕಚ್ಚಾ ತೈಲ ಖರೀದಿಸುವಂತೆ ಭಾರತಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.

'ಗ್ರಹಾಂ ಕಾಯ್ದೆಯ ಸೆಕ್ಷನ್ 115(ಎ) ಪ್ರಕಾರ, ಸೆಕ್ಷನ್ 112 ಮತ್ತು 113ರಲ್ಲಿ ಒದಗಿಸಲಾದ ಯಾವುದೇ ಸುಂಕಗಳ ಅನ್ವಯವನ್ನು ಈ ಮೂಲಕ ಮನ್ನಾ ಮಾಡುತ್ತೇನೆ' ಎಂದು ಭಾರತಕ್ಕೆ ದಂಡನಾತ್ಮಕ ಸುಂಕಗಳಿಂದ ವಿನಾಯಿತಿ ನೀಡುವ ಅಕ್ಟೋಬರ್ 23ರ ಕಾರ್ಯಕಾರಿ ಆದೇಶದಲ್ಲಿ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಇಂತಹ ಮಸೂದೆಯೊಂದರಲ್ಲಿ ಭಾರತವನ್ನು ಹೆಸರಿಸಿರುವುದು ಇದೇ ಮೊದಲು ಎಂದು ವರದಿಯಾಗಿದೆ. ತುರ್ಕಿಯೆ, ಅಝರ್‌ಬೈಜಾನ್, ಹಂಗೇರಿ, ಸ್ಲೊವಾಕ್ ಗಣರಾಜ್ಯ, ಯುಎಇ, ಸಿಂಗಪುರ, ಕಝಾಕಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯಗಳೂ ಶೇಕಡಾ 100ರಷ್ಟು ಸುಂಕದ ಪ್ರಸ್ತಾವಿತ ವ್ಯಾಪ್ತಿಯಲ್ಲಿವೆ.

ಮಾಧವ್ ಹೇಳಿಕೆಗೆ ಕ್ಷಮೆಯಾಚನೆ

ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್ ಅವರು ಎಪ್ರಿಲ್‌ ನಲ್ಲಿ ವಾಷಿಂಗ್ಟನ್‌ ನ ಹಡ್ಸನ್ ಇನ್‌ಸ್ಟಿಟ್ಯೂಟ್‌ ನಲ್ಲಿ ಮಾತನಾಡುವಾಗ, ಅಮೆರಿಕದ ಒತ್ತಡದಿಂದ ಭಾರತವು ರಷ್ಯಾದ ತೈಲ ಆಮದು ನಿಲ್ಲಿಸಲು ಒಪ್ಪಿಕೊಂಡಿತ್ತು ಎಂಬರ್ಥದ ಹೇಳಿಕೆ ನೀಡಿದ್ದರು. ಬಳಿಕ ತಮ್ಮ ಹೇಳಿಕೆ ತಪ್ಪಾಗಿತ್ತು ಎಂದು ಒಪ್ಪಿಕೊಂಡು ಎಪ್ರಿಲ್ 24ರಂದು ಕ್ಷಮೆಯಾಚಿಸಿದ್ದರು.

'ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಲು ಯಾವುದೇ ಸಮಯದಲ್ಲೂ ಒಪ್ಪಿರಲಿಲ್ಲ. ಶೇಕಡಾ 50ರಷ್ಟು ಸುಂಕ ವಿಧಿಸುವುದನ್ನೂ ತೀವ್ರವಾಗಿ ವಿರೋಧಿಸಿತ್ತು. ಮತ್ತೊಬ್ಬ ಚರ್ಚೆಯಲ್ಲಿ ಭಾಗವಹಿಸಿದ್ದವರ ವಾದಕ್ಕೆ ಪ್ರತಿಕ್ರಿಯಿಸಲು ಪ್ರಯತ್ನಿಸುವಾಗ ವಾಸ್ತವಿಕವಾಗಿ ತಪ್ಪಾದ ಹೇಳಿಕೆ ನೀಡಿದ್ದೆ. ಕ್ಷಮೆಯಾಚಿಸುತ್ತೇನೆ' ಎಂದು ಅವರು ಎಕ್ಸ್‌ ನಲ್ಲಿ ಬರೆದಿದ್ದರು.

ಇತ್ತೀಚೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ರಷ್ಯಾದ ಕಚ್ಚಾ ತೈಲ ಆಮದು ಕಡಿಮೆ ಮಾಡುವಂತೆ ಅಮೆರಿಕದಿಂದ ಯಾವುದೇ ಒತ್ತಡ ಬಂದಿರಲಿಲ್ಲ ಎಂದು ಹೇಳಿದ್ದರು. ಈ ಕುರಿತು ಕೇಳಿದಾಗ, 'ನನಗೆ ಎಂದಿಗೂ ಅಂತಹ ಅನುಭವವಾಗಿಲ್ಲ' ಎಂದು ಅವರು ಪ್ರತಿಕ್ರಿಯಿಸಿದ್ದರು.

ASPI ತನ್ನ ವೆಬ್‌ಸೈಟ್‌ ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಂಪೂರ್ಣ ಚರ್ಚೆಯನ್ನು ಪ್ರಕಟಿಸಿದೆ. ಇದರಲ್ಲಿ ಅಮೆರಿಕ–ಭಾರತ ಸಂಬಂಧಗಳು, ವ್ಯಾಪಾರ ಮತ್ತು ಇಂಧನ ಭದ್ರತೆಯ ಕುರಿತು ವಿಸ್ತೃತ ಚರ್ಚೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor