ಹಾರ್ಮುಝ್ ಜಲಸಂಧಿಯಲ್ಲಿ ನಾಲ್ಕು ಹಡಗುಗಳ ಮಾರ್ಗ ಬದಲಾವಣೆ
ಸಾಂದರ್ಭಿಕ ಚಿತ್ರ Photo: x.com/FinancialXpress
ಮಸ್ಕತ್, ಜು. 5: ಒಮಾನ್ ಕರಾವಳಿಯುದ್ದಕ್ಕೂ ಸಾಗುವ ದಕ್ಷಿಣ ಮಾರ್ಗದ ಮೂಲಕ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ನಾಲ್ಕು ಹಡಗುಗಳು ತಮ್ಮ ಸಂಚಾರ ಮಾರ್ಗವನ್ನು ಬದಲಾಯಿಸಿವೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆ ವಿಂಡ್‌ವರ್ಡ್ ತಿಳಿಸಿದೆ ಎಂದು Al Jazeera ವರದಿ ಮಾಡಿದೆ.
ವಿಂಡ್‌ವರ್ಡ್‌ನ ಮಾಹಿತಿ ಪ್ರಕಾರ, ನಾಲ್ಕು ಹಡಗುಗಳಲ್ಲಿ ಎರಡು ಹಡಗುಗಳು ಹಿಂದಕ್ಕೆ ತಿರುಗಿದ್ದು, ಉಳಿದ ಎರಡು ಹಡಗುಗಳು ದಕ್ಷಿಣ ಮಾರ್ಗವನ್ನು ತೊರೆದು ಹಾರ್ಮುಝ್ ಜಲಸಂಧಿಯ ಕೇಂದ್ರ ಕಾರಿಡಾರ್ ಮೂಲಕ ಸಂಚರಿಸಲು ಮುಂದಾಗಿವೆ.
ಒಮಾನ್‌ನ ಪ್ರಾದೇಶಿಕ ಜಲಪ್ರದೇಶದ ಮೂಲಕ ಸಾಗುವ ದಕ್ಷಿಣ ಮಾರ್ಗದ ಬಳಕೆಯನ್ನು ಇರಾನ್ ವಿರೋಧಿಸುತ್ತಿದೆ. ಈ ಮಾರ್ಗದಲ್ಲಿ ಸಂಚರಿಸಿದ್ದ ಕನಿಷ್ಠ ಎರಡು ಹಡಗುಗಳ ಮೇಲೆ ಈ ಹಿಂದೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಒಮಾನ್, ಅಮೆರಿಕ ಮತ್ತು ವಿಶ್ವಸಂಸ್ಥೆಯು ಜೂನ್ ಅಂತ್ಯದಲ್ಲಿ ದಕ್ಷಿಣ ಮಾರ್ಗವನ್ನು ಘೋಷಿಸಿದ್ದವು.
ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, 60 ದಿನಗಳ ಅವಧಿಯವರೆಗೆ ಹಾರ್ಮುಝ್ ಜಲಸಂಧಿಯಲ್ಲಿನ ಸಂಚಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ತನ್ನದಾಗಿರುತ್ತದೆ ಎಂದು ಇರಾನ್ ಹೇಳಿಕೊಂಡಿದೆ. ಈ ಅವಧಿ ಮುಗಿದ ಬಳಿಕ ಜಲಮಾರ್ಗದ ಸೇವೆಗಳಿಗೆ ಶುಲ್ಕ ವಿಧಿಸುವ ಕುರಿತು ಒಮಾನ್‌ನೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿರುವುದಾಗಿಯೂ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಸಮುದ್ರ ಸಂಚಾರದಲ್ಲಿ ಸಾಧಾರಣ ಚೇತರಿಕೆ ಕಂಡುಬಂದಿದೆ ಎಂದು ಹಡಗು ಟ್ರ್ಯಾಕಿಂಗ್ ಸಂಸ್ಥೆಗಳು ವರದಿ ಮಾಡಿವೆ. ಆದರೂ, ಸಮುದ್ರ ಸಂಚಾರವು ಇನ್ನೂ ಯುದ್ಧಪೂರ್ವ ಮಟ್ಟವನ್ನು ತಲುಪಿಲ್ಲ ಎಂದು ಅವು ಹೇಳಿವೆ.