×
Ad

ಖಾಮಿನೈ ಅಂತ್ಯಕ್ರಿಯೆ | ಗಮನ ಸೆಳೆದ 14 ತಿಂಗಳ ಮೊಮ್ಮಗಳ ಮೃತದೇಹವಿರುವ ಪೆಟ್ಟಿಗೆ : ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಟೆಹ್ರಾನ್‌

Update: 2026-07-04 11:03 IST

Photo | AFP

ಟೆಹ್ರಾನ್, ಜು. 4: ಇರಾನ್‌ ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆ ಸಮಾರಂಭಗಳು ಶುಕ್ರವಾರ ಅಧಿಕೃತವಾಗಿ ಆರಂಭಗೊಂಡಿದ್ದು, ಟೆಹ್ರಾನ್‌ ನ ಇಮಾಮ್ ಖಾಮಿನೈ ಗ್ರ್ಯಾಂಡ್ ಮೊಸಲ್ಲಾದಲ್ಲಿ ಸಾವಿರಾರು ಶೋಕತಪ್ತರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ, ಖಾಮಿನೈ ಅವರ 14 ತಿಂಗಳ ಮೊಮ್ಮಗಳ ಮೃತದೇಹವಿರುವ ಸಣ್ಣ ಪೆಟ್ಟಿಗೆ ಪಕ್ಕದಲ್ಲಿ ಇರಿಸಲಾಗಿದ್ದು, ಭಾವನಾತ್ಮಕ ದೃಶ್ಯಗಳು ಕಂಡು ಬಂದವು.

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಅಮೆರಿಕ–ಇಸ್ರೇಲ್ ಜಂಟಿ ವಾಯುದಾಳಿಯಲ್ಲಿ ಮೃತಪಟ್ಟ ಖಾಮಿನೈ ಮತ್ತು ಅವರ ಕುಟುಂಬದ ಮೂವರು ಸದಸ್ಯರ ಶವಪೆಟ್ಟಿಗೆಗಳನ್ನು ಟೆಹ್ರಾನ್‌ ನ ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಇರಿಸಲಾಗಿತ್ತು. ಇವರಲ್ಲಿ ಖಾಮಿನೈ ಅವರ 14 ತಿಂಗಳ ಮೊಮ್ಮಗಳ ಮೃತದೇಹವಿದ್ದ ಪೆಟ್ಟಿಗೆಯು ಶೋಕತಪ್ತರ ಗಮನ ಸೆಳೆಯಿತು.

ಇರಾನ್‌ನ ಮಾಧ್ಯಮಗಳ ವರದಿ ಪ್ರಕಾರ, ಫೆಬ್ರವರಿ 28ರಂದು ನಡೆದ ವಾಯುದಾಳಿಯಲ್ಲಿ ಮೃತಪಟ್ಟ ಮಗುವನ್ನು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಎಂದು ಗುರುತಿಸಲಾಗಿದೆ. ಇರಾನ್‌ ನ ತ್ರಿವರ್ಣ ಧ್ವಜದಲ್ಲಿ ಹೊದಿಸಲಾಗಿದ್ದ ಆಕೆಯ ಪುಟ್ಟ ಮೃತದೇಹದ ಪೆಟ್ಟಿಗೆಯನ್ನು ಖಾಮಿನೈ ಅವರ ಮೃತದೇಹದ ಪಕ್ಕದಲ್ಲಿ ಇರಿಸಲಾಗಿತ್ತು.  ಪೆಟ್ಟಿಗೆಯ ಸಮೀಪ ಶಿಶುವಿನ ಪೋಟೊವನ್ನು ಕೂಡ ಪ್ರದರ್ಶಿಸಲಾಗಿತ್ತು. ಅಂತಿಮ ದರ್ಶನಕ್ಕೆ ಆಗಮಿಸಿದ್ದವರು ಮೌನವಾಗಿ ನಿಂತು ಗೌರವ ಸಲ್ಲಿಸಿದರು.

ವಾಯುದಾಳಿಯಲ್ಲಿ ಮೃತಪಟ್ಟ ಖಾಮಿನೈ ಅವರ ಕುಟುಂಬದ ಇತರ ಸದಸ್ಯರಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು. ಖಾಮಿನೈ ಅವರ ಅಳಿಯ, ಹಿರಿಯ ಪುತ್ರಿ ಹಾಗೂ ಇರಾನ್‌ ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಅವರ ಪತ್ನಿಯ  ಮೃತದೇಹವಿದ್ದ ಪಟ್ಟಿಗೆಯನ್ನು ಅಧಿಕೃತ ಅಂತ್ಯಕ್ರಿಯೆ ಆರಂಭಕ್ಕೂ ಮುನ್ನ ಖಾಮಿನೈ ಅವರ ಮೃತದೇಹವಿದ್ದ ಪೆಟ್ಟಿಗೆಯ ಪಕ್ಕದಲ್ಲಿ ಪ್ರದರ್ಶಿಸಲಾಯಿತು.

ಸಮಾರಂಭದಲ್ಲಿ ಹಲವು ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಅಂತಿಮ ಗೌರವ ಸಲ್ಲಿಸುವ ವೇಳೆ ಕಣ್ಣೀರಿಟ್ಟರು. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್, ಹಿರಿಯ ಸೇನಾ ಕಮಾಂಡರ್‌ಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ದೇಶಗಳ ನಿಯೋಗಗಳ ಪ್ರತಿನಿಧಿಗಳೂ ಅಂತಿಮ ನಮನ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News