×
Ad

“ಒಂದೇ ಹೊಡೆತದಿಂದ ಅವರನ್ನು ನಿರ್ನಾಮ ಮಾಡಬಹುದಿತ್ತು”: ಖಾಮಿನೈ ಅಂತ್ಯಕ್ರಿಯೆಯಲ್ಲಿ ನೆರೆದಿದ್ದ ಇರಾನ್ ನಾಯಕರನ್ನುದ್ದೇಶಿಸಿ ಟ್ರಂಪ್ ಹೇಳಿಕೆ

“ಅಂತ್ಯಕ್ರಿಯೆಯಲ್ಲಿ ಇರಾನ್ ಜನರು ಅಳುತ್ತಿರುವುದು ನೋಡಿ ಆಶ್ಚರ್ಯವಾಯಿತು”

Update: 2026-07-05 11:04 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಷಿಂಗ್ಟನ್ : ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ನೆರೆದಿದ್ದ ಇಡೀ ಇರಾನ್ ನ ನಾಯಕತ್ವವನ್ನು ಒಂದೇ ದಾಳಿಯಲ್ಲಿ ನಿರ್ನಾಮ ಮಾಡಬಹುದಿತ್ತು. ಆದರೆ, ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ, ಹಾಗೆ ಮಾಡಿದರೆ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯಲ್ಲಿ ಇರಾನ್‌ನ ಹಿರಿಯ ನಾಯಕರು ಒಂದೇ ಸ್ಥಳದಲ್ಲಿ ಸೇರಿದ್ದನ್ನು ಉಲ್ಲೇಖಿಸಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

"ಅವರೆಲ್ಲರೂ ಒಂದೇ ಸ್ಥಳದಲ್ಲಿದ್ದಾರೆ. ಒಂದೇ ಶಾಟ್‌ನಲ್ಲಿ ಎಲ್ಲರನ್ನೂ ಹೊಡೆದುರುಳಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಏಕೆಂದರೆ, ಹಾಗೆ ಮಾಡಿದರೆ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ" ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಸುದ್ದಿವಾಹಿನಿಯೊಂದಿಗಿನ ಸಂವಾದದಲ್ಲಿ ಮಾತನಾಡಿದ ಟ್ರಂಪ್, ಜನರು ಅಲಿ ಖಾಮಿನೈಯನ್ನು ದ್ವೇಷಿಸುತ್ತಾರೆ ಎಂದು ಭಾವಿಸಿದ್ದೆ. ಅಂತ್ಯಕ್ರಿಯೆಯಲ್ಲಿ ಇರಾನಿನ ಕೆಲ ಜನರು ಅಳುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು, ಬಹುಶಃ ಅದು ನಕಲಿ ಕಣ್ಣೀರು ಇರಬಹುದು ಎಂದು ಹೇಳಿದರು.

ಅರ್ಮೇನಿಯಾದಲ್ಲಿನ ಇರಾನ್‌ನ ರಾಯಭಾರ ಕಚೇರಿಯು ಎಕ್ಸ್ ನಲ್ಲಿ ಟ್ರಂಪ್ ಪೋಸ್ಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ನಿಮಗೆ ನಾಗರಿಕತೆ ಇಲ್ಲ, ಇತಿಹಾಸ ಇಲ್ಲ, ಗೌರವವೂ ಇಲ್ಲ. ಆದ್ದರಿಂದ ಇಂತಹ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದೆ.

ಇದಕ್ಕೂ ಮೊದಲು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಾದ 'ಫೋರ್ಥ್ ಆಫ್ ಜುಲೈ' ಕಾರ್ಯಕ್ರಮದ ಮುನ್ನ ಮಾತನಾಡಿದ್ದ ಟ್ರಂಪ್, "ನಾವು ಇರಾನ್‌ಗೆ ಭಾರೀ ಹೊಡೆತ ನೀಡಿದ್ದೇವೆ. ಈಗ ಅವರು ಒಪ್ಪಂದಕ್ಕಾಗಿ ಕಾತರರಾಗಿದ್ದಾರೆ. ಅಂತ್ಯಕ್ರಿಯೆಗೆ ನಾವು ಒಂದು ವಾರ ಸಮಯ ನೀಡಿದ್ದೇವೆ. ಏಕೆಂದರೆ ನಾವು ಒಳ್ಳೆಯವರಾಗಿದ್ದೇವೆ" ಎಂದು ಟ್ರಂಪ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News