ಮಾಜಿ ಅಧ್ಯಕ್ಷ ಬೋಲ್ಸೊನಾರೊ ಗೃಹಬಂಧನ ಮುಂದುವರಿಸಲು ಬ್ರೆಝಿಲ್ ಸುಪ್ರೀಂ ಕೋರ್ಟ್ ಆದೇಶ
ಬೋಲ್ಸೊನಾರೊ | Photo credit : NDTV
ಬ್ರಾಸಿಲಿಯಾ, ಜು. 4: ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ ಬ್ರೆಝಿಲ್ ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರನ್ನು ಗೃಹಬಂಧನದಲ್ಲೇ ಮುಂದುವರಿಸಲು ಬ್ರೆಝಿಲ್ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರಾಯಿಸ್ ಆದೇಶಿಸಿದ್ದಾರೆ ಎಂದು ಶುಕ್ರವಾರ ಪ್ರಕಟವಾದ ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.
71 ವರ್ಷದ ಬೋಲ್ಸೊನಾರೊ ಅವರು 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್ ಇನಾಸಿಯೊ ಲುಲಾ ದ ಸಿಲ್ವಾ ವಿರುದ್ಧ ಸೋತಿದ್ದರು. ಬಳಿಕ ದಂಗೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಹಿನ್ನೆಲೆಯಲ್ಲಿ, ಕಳೆದ ನವೆಂಬರ್‌ನಿಂದ 27 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ತೀವ್ರ ನ್ಯುಮೋನಿಯಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಬೋಲ್ಸೊನಾರೊ ಅವರಿಗೆ ವೈದ್ಯಕೀಯ ಕಾರಣಗಳನ್ನು ಪರಿಗಣಿಸಿ, 90 ದಿನಗಳ ಕಾಲ ಗೃಹಬಂಧನದಲ್ಲಿ ಶಿಕ್ಷೆ ಅನುಭವಿಸಲು ನ್ಯಾಯಮೂರ್ತಿ ಮೊರಾಯಿಸ್ ಅನುಮತಿ ನೀಡಿದ್ದರು.
ಬೋಲ್ಸೊನಾರೊ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿದರೆ, ಮನೆಯಲ್ಲಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿರುವುದರಿಂದ ಗೃಹಬಂಧನವನ್ನು ಮುಂದುವರಿಸಬೇಕು ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. 2018ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಇರಿತಕ್ಕೊಳಗಾಗಿದ್ದ ಬೋಲ್ಸೊನಾರೊ ಅವರು, ಇತ್ತೀಚಿನ ವರ್ಷಗಳಲ್ಲಿ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
"ಈ ಹಂತದಲ್ಲಿ ಮಾನವೀಯ ದೃಷ್ಟಿಕೋನದಿಂದ ಗೃಹಬಂಧನವನ್ನು ಮುಂದುವರಿಸುವುದು ಸಮಂಜಸ ಹಾಗೂ ಸೂಕ್ತ ಕ್ರಮವಾಗಿದೆ" ಎಂದು ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರಾಯಿಸ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಗೃಹಬಂಧನದ ಅವಧಿಯಲ್ಲಿ ಬೋಲ್ಸೊನಾರೊ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಕಳೆದ ತಿಂಗಳು ಪೊಲೀಸ್ ತಪಾಸಣೆ ವೇಳೆ, ಬೋಲ್ಸೊನಾರೊ ಅವರ ಭದ್ರತಾ ಸಿಬ್ಬಂದಿಯೊಬ್ಬರ ಬಳಿ ಇದ್ದ ಬೋಲ್ಸೊನಾರೊ ಅವರ ಪರವಾನಗಿ ಪಡೆದ ಬಂದೂಕನ್ನು ವಶಪಡಿಸಿಕೊಂಡ ಘಟನೆಯ ಬಳಿಕ ಗೃಹಬಂಧನ ಮುಂದುವರಿಕೆಯ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಆದರೆ, ಬೋಲ್ಸೊನಾರೊ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಗೃಹಬಂಧನವನ್ನು ಮುಂದುವರಿಸಲು ನ್ಯಾಯಮೂರ್ತಿ ಮೊರಾಯಿಸ್ ಆದೇಶಿಸಿದ್ದಾರೆ.
ಈ ವಾರದ ಆರಂಭದಲ್ಲಿ ನ್ಯಾಯಮೂರ್ತಿ ಮೊರಾಯಿಸ್ ಅವರ ಮನವಿಯ ಮೇರೆಗೆ ಅಭಿಪ್ರಾಯ ನೀಡಿದ್ದ ಅಟಾರ್ನಿ ಜನರಲ್ ಪೌಲೊ ಗೊನೆಟ್, ಬಂದೂಕು ವಶಪಡಿಸಿಕೊಂಡ ಘಟನೆ ನಡೆದಿದ್ದರೂ ಬೋಲ್ಸೊನಾರೊ ಅವರನ್ನು ಗೃಹಬಂಧನದಲ್ಲೇ ಮುಂದುವರಿಸಬೇಕು ಎಂದು ಶಿಫಾರಸು ಮಾಡಿದ್ದರು.
ಅದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಮೂರ್ತಿ ಮೊರಾಯಿಸ್, ಆರಂಭಿಕ ಗೃಹಬಂಧನ ಅವಧಿಯಲ್ಲಿ ಬೋಲ್ಸೊನಾರೊ ಅವರು ಯಾವುದೇ "ಗಂಭೀರ ದುರ್ವರ್ತನೆ" ಎಸಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.