×
Ad

Iran | ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅಂತ್ಯಕ್ರಿಯೆ ಅಧಿಕೃತವಾಗಿ ಆರಂಭ; ಕಣ್ಣೀರು ಹಾಕಿದ ನಾಯಕರು

►ಟೆಹ್ರಾನ್‌ನಲ್ಲಿ ಲಕ್ಷಾಂತರ ಜನರಿಂದ ಅಂತಿಮ ನಮನ ►ಭಾರತದ ಪರವಾಗಿ ಪಬಿತ್ರಾ ಮಾರ್ಗರಿಟಾ, ಸೈಯದ್ ಅತಾ ಹಸ್ನೈನ್ ಭಾಗಿ

Update: 2026-07-04 10:20 IST

Photo | Murad Sezer/Reuters

ಟೆಹ್ರಾನ್, ಜು. 4: ಇರಾನ್‌ ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ವಿದಾಯ ಮತ್ತು ಅಂತ್ಯಕ್ರಿಯೆ ಕಾರ್ಯಕ್ರಮಗಳು ಶುಕ್ರವಾರ ಟೆಹ್ರಾನ್‌ನಲ್ಲಿ ಆರಂಭಗೊಂಡಿವೆ. ರಾಜಧಾನಿಯ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಕ್ಷಾಂತರ ಶೋಕತಪ್ತರು ಅಂತಿಮ ಗೌರವ ಸಲ್ಲಿಸಲು ಜಮಾಯಿಸಿದ್ದಾರೆ ಎಂದು ಇರಾನಿನ ಮಾಧ್ಯಮಗಳನ್ನು ಉಲ್ಲೇಖಿಸಿ Aljazeera ವರದಿ ಮಾಡಿವೆ

ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಟೆಹ್ರಾನ್‌ ನ ಪ್ರಮುಖ ಪ್ರಾರ್ಥನಾ ಸಂಕೀರ್ಣದ ಬಾಗಿಲುಗಳನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದ್ದು, ದಿವಂಗತ ನಾಯಕರಿಗೆ ಅಂತಿಮ ನಮನ ಸಲ್ಲಿಸಲು ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದಾರೆ.

ಈ ವರ್ಷದ ಫೆಬ್ರುವರಿ 28ರಂದು ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದ ಆಯತೊಲ್ಲಾ ಅಲಿ ಖಾಮಿನೈ ಅವರ ಶೋಕಾಚರಣೆ ಮತ್ತು ವಿದಾಯ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಭಾವುಕರಾಗಿ ಕಣ್ಣೀರು ಹಾಕಿದರು ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ಟೆಹ್ರಾನ್‌ನಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ದೇಶದ ರಾಜಕೀಯ ಮತ್ತು ಧಾರ್ಮಿಕ ನಾಯಕರು ದಿವಂಗತ ಸರ್ವೋಚ್ಚ ನಾಯಕರಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಾಲಿಬಾಫ್ ಮತ್ತು ಅರಘ್ಚಿ ಭಾವುಕರಾದ ದೃಶ್ಯಗಳು ಗಮನ ಸೆಳೆದವು.

ಟೆಹ್ರಾನ್ ಗವರ್ನರ್ ಮೊಹಮ್ಮದ್ ಸದೇಘ್ ಮೊಟಮಾಡಿಯನ್ ಮಾತನಾಡಿ, "ಹುತಾತ್ಮ ನಾಯಕನ ವಿದಾಯ ಮತ್ತು ಅಂತ್ಯಕ್ರಿಯೆ ಕಾರ್ಯಕ್ರಮಗಳಿಗೆ ಅತ್ಯುನ್ನತ ಮಟ್ಟದ ಭದ್ರತೆ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಶನಿವಾರ ಬೆಳಿಗ್ಗೆ 6 ಗಂಟೆಗೆ ನಿಖರವಾಗಿ ಟೆಹ್ರಾನ್ ಪ್ರಾರ್ಥನಾ ಮೈದಾನದ ಬಾಗಿಲುಗಳನ್ನು ತೆರೆಯಲಾಗುವುದು. ಬೆಳಿಗ್ಗೆ 6 ಗಂಟೆಗೆ ಮೊದಲು ಅವುಗಳನ್ನು ತೆರೆಯುವುದಿಲ್ಲ. ಸಾರ್ವಜನಿಕರು ಈ ಸಮಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಜಿಸಬೇಕು" ಎಂದು ಅವರು ಹೇಳಿದ್ದಾರೆ.

ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಹಾಗೂ ಬಿಹಾರ ರಾಜ್ಯಪಾಲ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.

ಈ ಕುರಿತು ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರಕಟಣೆ ನೀಡಿದ್ದು, "ಭಾರತೀಯ ಗಣ್ಯರು ಇರಾನ್‌ನ ದಿವಂಗತ ನಾಯಕ ಆಯತೊಲ್ಲಾ ಸೆಯ್ಯದ್ ಅಲಿ ಖಾಮಿನೈ ಅವರಿಗೆ ಗೌರವ ಸಲ್ಲಿಸಿದ್ದಾರೆ" ಎಂದು ತಿಳಿಸಿದೆ.





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News