ಗಾಝಾ ಕದನ ವಿರಾಮದ ಬಗ್ಗೆ ಹೊಸ ಪ್ರಸ್ತಾಪ: ಹಮಾಸ್
Photo: NDTV | ಸಾಂದರ್ಭಿಕ ಚಿತ್ರ
ಕೈರೊ, ಆ.18: ಗಾಝಾದಲ್ಲಿ ಕದನ ವಿರಾಮಕ್ಕೆ ಹೊಸ ಪ್ರಸ್ತಾಪವನ್ನು ಈಜಿಪ್ಟ್ ನಲ್ಲಿರುವ ಹಮಾಸ್ ಪ್ರತಿನಿಧಿಗಳು ಪಡೆದಿದ್ದಾರೆ ಎಂದು ಫೆಲೆಸ್ತೀನಿಯನ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಈ ಮಧ್ಯೆ, ಪ್ರಮುಖ ಮಧ್ಯವರ್ತಿ ಖತರ್ನ ಪ್ರಧಾನಿ ಕೂಡಾ ಈಜಿಪ್ಟ್ ಗೆ ಆಗಮಿಸಿದ್ದು ಕದನ ವಿರಾಮಕ್ಕೆ ಪ್ರಯತ್ನಗಳನ್ನು ಮುಂದುವರಿಸಿರುವುದಾಗಿ ವರದಿಯಾಗಿದೆ. ಗಾಝಾದಲ್ಲಿ ಶಾಶ್ವತ ಕದನ ವಿರಾಮ ಸ್ಥಾಪನೆಗೆ ಈಜಿಪ್ಟ್, ಖತರ್ ಹಾಗೂ ಅಮೆರಿಕದ ಮಧ್ಯವರ್ತಿಗಳು ನಡೆಸುತ್ತಿರುವ ಪ್ರಯತ್ನ ಇದುವರೆಗೆ ಪ್ರಯತ್ನ ನೀಡಿಲ್ಲ. ಮಧ್ಯವರ್ತಿಗಳ ಇತ್ತೀಚಿನ ಪ್ರಸ್ತಾಪವು ಶಾಶ್ವತ ಕದನ ವಿರಾಮದ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸುವ ಒಂದು ಚೌಕಟ್ಟಿನ ಒಪ್ಪಂದವಾಗಿದೆ. ಆರಂಭಿಕ 60 ದಿನಗಳ ಒಪ್ಪಂದ ಮತ್ತು ಎರಡು ಬ್ಯಾಚ್ಗಳಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಮುಖ ಅಂಶವಾಗಿದೆ.
ಪ್ರಸ್ತಾಪದ ಬಗ್ಗೆ ಪರಿಶೀಲಿಸಲು ಹಮಾಸ್ ನಾಯಕರು ಆಂತರಿಕ ಸಮಲೋಚನೆಯ ಜೊತೆಗೆ ಇತರ ಫೆಲೆಸ್ತೀನಿಯನ್ ಗುಂಪುಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಹೊಸ ಕದನ ವಿರಾಮ ಯೋಜನೆಯ ಪ್ರಕಾರ ` 60 ದಿನಗಳ ಕದನ ವಿರಾಮ. ಈ ಅವಧಿಯಲ್ಲಿ ಇಸ್ರೇಲ್ ನ 10 ಜೀವಂತ ಒತ್ತೆಯಾಳುಗಳ ಬಿಡುಗಡೆ, ಜೊತೆಗೆ ಮೃತಪಟ್ಟಿರುವ ಕೆಲವು ಒತ್ತೆಯಾಳುಗಳ ಮೃತದೇಹ ಹಸ್ತಾಂತರ. ಎರಡನೇ ಹಂತದಲ್ಲಿ ಅಂತರಾಷ್ಟ್ರೀಯ ಖಾತರಿಯೊಂದಿಗೆ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಬಗ್ಗೆ ವಿಶಾಲ ಒಪ್ಪಂದ ಹಾಗೂ ಉಳಿದ ಒತ್ತೆಯಾಳುಗಳ ಬಿಡುಗಡೆ. ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆದಾರರು ಮುಂದಿರಿಸಿದ ಪ್ರಸ್ತಾವನೆಯನ್ನು ಎಲ್ಲಾ ಫೆಲೆಸ್ತೀನ್ ಗುಂಪುಗಳೂ ಬೆಂಬಲಿಸುತ್ತಿವೆ ಎಂದು ಮೂಲಗಳು ಹೇಳಿವೆ.