ಹೌತಿ ದಾಳಿ: ಸೌದಿ ವಾಯು ರಕ್ಷಣಾ ವ್ಯವಸ್ಥೆ ವೈಫಲ್ಯದ ಬಗ್ಗೆ ತನಿಖೆ
ರಿಯಾದ್ ವಿಮಾನ ನಿಲ್ದಾಣದತ್ತ ಕ್ಷಿಪಣಿ, ಡ್ರೋನ್ ಗಳ ದಾಳಿ; ಮುನ್ನೆಚ್ಚರಿಕೆ ನೀಡುವಲ್ಲಿ ವಿಫಲವಾದುದೇಕೆ?
Photo :X.com /AJEnglish
ರಿಯಾದ್: ಹೌತಿ ಬಂಡುಕೋರರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯುವಲ್ಲಿ ಸೌದಿ ಅರೇಬಿಯದ ವಾಯು ರಕ್ಷಣಾ ವ್ಯವಸ್ಥೆಗಳು ವಿಫಲವಾಗಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ಪ್ರಾದೇಶಿಕ ಅಧಿಕಾರಿಗಳು AP (Associated Press)ಗೆ ನೀಡಿದ ಮಾಹಿತಿ ಪ್ರಕಾರ, ಯೆಮೆನ್ ನಲ್ಲಿರುವ ಸಶಸ್ತ್ರ ಹೌತಿ ಗುಂಪು ಮೊದಲು ಹಲವು ಡ್ರೋನ್ ಗಳನ್ನು ಹಾರಿಸಿದೆ. ಬಳಿಕ ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹೌತಿಗಳ ಬಳಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಸಿಡಿತಲೆಗಳನ್ನು ಹೊಂದಿರುವ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳಿವೆ ಎಂದು APವರದಿ ಮಾಡಿದೆ. ಹಾರಾಟದ ನಡುವೆಯೇ ದಿಕ್ಕು ಬದಲಾಯಿಸಬಲ್ಲ ಈ ಕ್ಷಿಪಣಿಗಳು, ಸೌದಿ ಅರೇಬಿಯ ಬಳಸುವ ಪೇಟ್ರಿಯಾಟ್ ಇಂಟರ್‌ಸೆಪ್ಟರ್‌ಗಳು ಸೇರಿದಂತೆ ಇತರ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಸವಾಲೊಡ್ಡಬಲ್ಲವು.
ಮುನ್ನೆಚ್ಚರಿಕೆ ವ್ಯವಸ್ಥೆ ವಿಫಲವಾಗಿದ್ದೇಕೆ?
ದಾಳಿಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವಲ್ಲಿ ಸೌದಿಯ ವಾಯು ರಕ್ಷಣಾ ವ್ಯವಸ್ಥೆಗಳು ಏಕೆ ವಿಫಲವಾದವು ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೌತಿ ಕ್ಷಿಪಣಿಗಳು ಮತ್ತು ಡ್ರೋನ್ ಗಳು ರಿಯಾದ್ ತಲುಪಲು 1,000 ಕಿ.ಮೀ. (620 ಮೈಲು) ಗಿಂತಲೂ ಹೆಚ್ಚು ದೂರ ಕ್ರಮಿಸಿವೆ. ಇಷ್ಟು ದೂರದಿಂದ ಬಂದ ದಾಳಿಯನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಾಧ್ಯವಾಗದಿರುವುದು ಸೌದಿಯ ವಾಯು ರಕ್ಷಣಾ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು Aljazeera ವರದಿ ತಿಳಿಸಿದೆ.