ʼಜಂಪ್ಡ್ ಡೆಪಾಸಿಟ್ʼ ವಂಚನೆ ಬಗ್ಗೆ ಗ್ರಾಹಕರಿಗೆ SBI ಎಚ್ಚರಿಕೆ; ಬ್ಯಾಂಕ್ ನೀಡಿದ ಸಲಹೆಗಳೇನು?
ಏನಿದು 'ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್'? ಇಲ್ಲಿದೆ ವಿವರ...
Photo Credit : @TheOfficialSBI
SBI ಪ್ರಕಾರ ವಂಚಕರು ಗ್ರಾಹಕರ ಬ್ಯಾಂಕ್ ಖಾತೆಗೆ ಹಠಾತ್ ಆಗಿ ಹಣದ ಮೊತ್ತವನ್ನು ವರ್ಗಾಯಿಸಿರುವುದಾಗಿ ಹೇಳುವುದರ ಜೊತೆಗೆ ವಂಚನೆ ಪ್ರಾರಂಭವಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ‘ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್’ ಎಂಬ ಹೆಸರಿನಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ವಂಚನೆಯಲ್ಲಿ ಬ್ಯಾಂಕ್ ಖಾತೆಗೆ ಅನುಮಾನಾಸ್ಪದ ಪಾವತಿ ವಿನಂತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ SBI ಸೂಚಿಸಿದೆ. ನಿಮ್ಮ ಖಾತೆಗೆ ಅನಿರೀಕ್ಷಿತವಾಗಿ ಹಣ ಜಮೆಯಾಗಿದೆಯೆ? ಇದೊಂದು ವಂಚನೆ ಎಂಬುವುದನ್ನು ಮರೆಯಬೇಡಿ ಎಂದು SBI ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಹೇಳಿದೆ.
‘ರಾಷ್ಟ್ರೀಯ ಸೈಬರ್ ಭದ್ರತಾ ವಿಶೇಷ ಅಭಿಯಾನ 6.0’ ಭಾಗವಾಗಿ ದೇಶದ ಅತಿ ದೊಡ್ಡ ಬ್ಯಾಂಕ್ SBI ಈ ಮಾಹಿತಿ ನೀಡಿದೆ. ವಂಚಕರು UPI ಪಾವತಿ ವಿನಂತಿಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಕದಿಯುವ ಮೊದಲು ಸಂತ್ರಸ್ತರ ವಿಶ್ವಾಸ ಗಳಿಸಲು ಸಣ್ಣ ಮೊತ್ತದ ಜಮೆ ಮಾಡುತ್ತಾರೆ ಎಂದು ಬ್ಯಾಂಕ್ ಹೇಳಿದೆ.
“ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್ ನಿಂದ ಎಚ್ಚರವಿರಿ. ಈ ವಂಚನೆಯಲ್ಲಿ ನಿಮ್ಮ ವಿಶ್ವಾಸ ಗಳಿಸಲು ವಂಚಕರು ನಿಮ್ಮ ಖಾತೆಗೆ ಹಠಾತ್ ಆಗಿ ಸಣ್ಣ ಮೊತ್ತ ಜಮಾ ಆಗಿದೆ ಎಂದು ಹೇಳುತ್ತಾರೆ. ಅದನ್ನು ಹಿಂತಿರುಗಿಸಲು ಯತ್ನಿಸಿದಾಗ ಹೆಚ್ಚಿನ ಮೌಲ್ಯದ ಪವಾತಿ ವಿನಂತಿ ಅನುಮೋದಿಸುವಂತೆ ನಿಮ್ಮನ್ನು ಮೋಸಗೊಳಿಸುತ್ತಾರೆ” ಎಂದು SBI ತನ್ನ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ತಿಳಿಸಿದೆ.
ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್ ಎಂದರೇನು?
SBI ಪ್ರಕಾರ ವಂಚಕರು ಗ್ರಾಹಕರ ಬ್ಯಾಂಕ್ ಖಾತೆಗೆ ಹಠಾತ್ ಆಗಿ ಹಣದ ಮೊತ್ತವನ್ನು ವರ್ಗಾಯಿಸಿರುವುದಾಗಿ ಹೇಳುವುದರ ಜೊತೆಗೆ ವಂಚನೆ ಪ್ರಾರಂಭವಾಗುತ್ತದೆ. ನಂತರ ವಂಚಕನು ಸಂತ್ರಸ್ತರನ್ನು ಸಂಪರ್ಕಿಸಿ ಹಣ ಹಿಂತಿರುಗಿಸುವಂತೆ ಕೋರುತ್ತಾರೆ. ಸರಳ ವರ್ಗಾವಣೆ ಕೇಳುವ ಬದಲು ವಂಚಕರು ‘ಪೇಮೆಂಟ್ ಕಲೆಕ್ಟ್ ರಿಕ್ವೆಸ್ಟ್’ ಅಥವಾ ಇನ್ನೊಂದು ವಹಿವಾಟು ವಿನಂತಿಯನ್ನು ಕಳುಹಿಸುತ್ತಾರೆ. ಇದು ಮೂಲ ಜಮೆಗಿಂತ ಹೆಚ್ಚಿನ ಮೊತ್ತವನ್ನು ಅನುಮೋದಿಸುವಂತೆ ಸಂತ್ರಸ್ತರನ್ನು ಮೋಸಗೊಳಿಸಲು ವಿನ್ಯಾಸಗೊಳಿಸಲಾಗಿರುತ್ತದೆ.
ವಂಚಕರು ಸಾಮಾನ್ಯವಾಗಿ ಭಾವನಾತ್ಮಕ ಪ್ರಭಾವ, ತುರ್ತು ಸ್ಥಿತಿ ಅಥವಾ ಆತುರದ ಸನ್ನಿವೇಶ ಬಳಸಿಕೊಂಡು ತ್ವರಿತ ವಹಿವಾಟು ಅನುಮೋದಿಸುವಂತೆ ಒತ್ತಡ ಹೇರುತ್ತಾರೆ ಎಂದು ಬ್ಯಾಂಕ್ ತಿಳಿಸಿದೆ. ಇಂತಹ ವಂಚನೆಯ ಅನುಮಾನ ಬಂದರೆ ಬ್ಯಾಂಕ್ ಮೂರು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ;
► ತಕ್ಷಣವೇ ಬ್ಲಾಕ್ ಮಾಡಿ ಮತ್ತು ಬ್ಯಾಂಕ್ ಗೆ ವರದಿ ಮಾಡಿ. ಕರೆ ಮಾಡಿದ ಸಂಖ್ಯೆಯನ್ನು ತಕ್ಷಣವೇ ಬ್ಲಾಕ್ ಮಾಡಬೇಕು ಮತ್ತು ಘಟನೆಯ ಬಗ್ಗೆ ಬ್ಯಾಂಕ್ ಗೆ ಆದ್ಯತೆಯ ಮೇರೆಗೆ ವರದಿ ಮಾಡಬೇಕು.
► ಒತ್ತಡಕ್ಕೆ ಮಣಿಯಬಾರದು. ಭಾವನಾತ್ಮಕ ಒತ್ತಡ ಹೇರುವ ಮಾತುಗಳಿಗೆ ಅಥವಾ ತುರ್ತು UPI ವಿನಂತಿಗಳಿಗೆ ಅವುಗಳನ್ನು ಖಚಿತಪಡಿಸಿಕೊಳ್ಳದೆ ಮಣಿಯಬೇಡಿ.
► ಕರೆ ಮಾಡುವವರನ್ನು ಪರಿಶೀಲಿಸಬೇಕು. ಯಾವಾಗಲೂ 1600 ಸಂಖ್ಯೆಯೊಂದಿಗೆ ಪ್ರಾರಂಭವಾಗುವ ಕರೆಗಳಿಗೆ ಪ್ರತಿಕ್ರಿಯಿಸಿ. ಇವು ಬ್ಯಾಂಕ್ ನಿಂದ ಬರುವ ಅಧಿಕೃತ ಮತ್ತು ಸುರಕ್ಷಿತ ಕರೆಗಳಾಗಿವೆ ಎಂದು SBI ತಿಳಿಸಿದೆ.
►ಜೊತೆಗೆ ನೀವೇ ಸ್ವತಃ ಪ್ರಾರಂಭಿಸದ ಯಾವುದೇ ಪಾವತಿ ವಿನಂತಿಯನ್ನು ಎಂದಿಗೂ ಅನುಮೋದಿಸಬಾರದು. ಅಲ್ಲದೆ, ನಿಮಗೆ ತಿಳಿಯದ ಅಥವಾ ಅನಿರೀಕ್ಷಿತವಾಗಿ ಹಣ ಜಮೆಯಾಗಿದ್ದನ್ನು ಗಮನಿಸಿದರೆ, ನೀವೇ ಸ್ವತಃ ಹಣವನ್ನು ಹಿಂತಿರುಗಿಸಲು ಪ್ರಯತ್ನಿಸಬೇಡಿ. ಬದಲಾಗಿ ಬ್ಯಾಂಕ್ ನ ಅಧಿಕೃತ ಸಂಖ್ಯೆ ಅಥವಾ ಶಾಖೆಯನ್ನು ಸಂಪರ್ಕಿಸಬೇಕು ಮತ್ತು ಹಣವನ್ನು ಹಿಂತಿರುಗಿಸುವ ಪ್ರಕ್ರಿಯೆ ಅವರೇ ನಿರ್ವಹಿಸುವಂತೆ ಮಾಡಬೇಕು.