×
Ad

ಪ್ರತಿಭಟನಾಕಾರರ ಮೇಲಿನ ಇರಾನ್‌ನ ದಮನಕಾರಿ ಕ್ರಮ ಖಂಡಿಸುವ UNHRC ನಿರ್ಣಯದ ವಿರುದ್ಧ ಮತ ಚಲಾಯಿಸಿದ ಭಾರತ

Update: 2026-01-24 14:20 IST

ಸಾಂದರ್ಭಿಕ ಚಿತ್ರ (X/@UN)

ಹೊಸದಿಲ್ಲಿ: ಸರಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಇರಾನ್ ನಡೆಸಿದ ದಮನಕಾರಿ ಕ್ರಮವನ್ನು ಖಂಡಿಸುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿರುವ ಬಗ್ಗೆ scroll.in ವರದಿ ಮಾಡಿದೆ.

ಇರಾನ್‌ನ "ಕ್ರೂರ ದಬ್ಬಾಳಿಕೆ"ಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು 47 ಸದಸ್ಯರ ಮಂಡಳಿಯು ಅಂಗೀಕರಿಸಿದೆ. ಮಂಡಳಿಯ 25 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, 14 ಸದಸ್ಯರು ಮತದಾನದಿಂದ ದೂರ ಉಳಿದರು. ಭಾರತ ಮತ್ತು ಚೀನಾ ಸೇರಿದಂತೆ ಏಳು ರಾಷ್ಟ್ರಗಳು ನಿರ್ಣಯಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟವನ್ನು ಖಂಡಿಸಿ ಇರಾನ್ ನಲ್ಲಿ ಡಿಸೆಂಬರ್ 28 ರಂದು ಪ್ರತಿಭಟನೆ ಪ್ರಾರಂಭವಾಗಿದ್ದವು. 100 ಕ್ಕೂ ಹೆಚ್ಚು ಪಟ್ಟಣಗಳಿಗೆ ಪ್ರತಿಭಟನೆ ವಿಸ್ತರಿಸಿತ್ತು.

ಮಂಡಳಿಯು ತನ್ನ ನಿರ್ಣಯದಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣವಾದ ಶಾಂತಿಯುತ ಪ್ರತಿಭಟನೆಗಳ ಹಿಂಸಾತ್ಮಕ ದಮನವನ್ನು ಖಂಡಿಸುತ್ತದೆ ಎಂದು ಹೇಳಿದೆ. ಮಾನವ ಹಕ್ಕುಗಳನ್ನು ಗೌರವಿಸಲು, ರಕ್ಷಿಸಲು ಇರಾನ್ ಸರಕಾರವನ್ನು ಒತ್ತಾಯಿಸಿದೆ. ಕಾನೂನುಬಾಹಿರ ಹತ್ಯೆಗಳು, ಬಲವಂತದ ಕಣ್ಮರೆ ಮತ್ತು ಪ್ರತಿಭಟನಾಕಾರರ ಬಂಧನಗಳನ್ನು ಕೊನೆಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ಣಯದಲ್ಲಿ ಇರಾನ್‌ಗೆ ಆಗ್ರಹಿಸಿದೆ.

"ಪ್ರತಿಭಟನೆಯಲ್ಲಿ ಕನಿಷ್ಠ 5,002 ಮಂದಿ ಮೃತಪಟ್ಟಿದ್ದು ಇದರಲ್ಲಿ 4,716 ಪ್ರತಿಭಟನಾಕಾರರು, 203 ಮಂದಿ ಸರಕಾರಕ್ಕೆ ಸಂಬಂಧಿಸಿದವರು, 43 ಮಕ್ಕಳು, 40 ಮಂದಿ ನಾಗರಿಕರು ಸೇರಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ 26,800 ಮಂದಿಯನ್ನು ಬಂಧಿಸಲಾಗಿದೆ" ಎಂದು ಅಮೆರಿಕಾ ಮೂಲದ `ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ' ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News