×
Ad

ಅಮೆರಿಕಾದಲ್ಲಿನ ಅಕ್ರಮ ವಲಸಿಗರಲ್ಲಿ ಮೂರನೆಯ ಅತಿ ದೊಡ್ಡ ಗುಂಪು ಭಾರತೀಯರು: ಅಧ್ಯಯನ ವರದಿ

Update: 2023-11-22 22:04 IST

Photo: indiatoday.in 

ವಾಷಿಂಗ್ಟನ್: ಅಮೆರಿಕಾದಲ್ಲಿರುವ ಅಕ್ರಮ ವಲಸಿಗ ಗುಂಪುಗಳ ಪೈಕಿ ಭಾರತೀಯರು ಮೂರನೆಯ ಅತಿ ದೊಡ್ಡ ಗುಂಪು ಎಂಬ ಸಂಗತಿ ಪ್ಯೂ ಸಂಶೋಧನಾ ಕೇಂದ್ರವು ಇತ್ತೀಚೆಗೆ ನಡೆಸಿರುವ ಅಧ್ಯಯನದಿಂದ ಬಹಿರಂಗಗೊಂಡಿದೆ. ವಾಷಿಂಗ್ಟನ್ ಮೂಲದ ಈ ಚಿಂತಕರ ಚಾವಡಿಯು ಅಧ್ಯಯನವನ್ನು ನಡೆಸಿದ್ದು, ಅಮೆರಿಕಾದಲ್ಲಿ ಸದ್ಯ 7,25,000 ಮಂದಿ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.

2017-2021ರ ನಡುವೆ ಅಮೆರಿಕಾವು ಅತಿ ಹೆಚ್ಚು ಅಕ್ರಮ ವಲಸೆಗೆ ಸಾಕ್ಷಿಯಾಗಿದ್ದು, ನೆರೆಯ ಮೆಕ್ಸಿಕೊದ ನಂತರ ಎಲ್ ಸಾಲ್ವಡೋರ್ (8,00,000) ಹಾಗೂ ಭಾರತದಿಂದ ಅತಿ ಹೆಚ್ಚು ಅಕ್ರಮ ವಲಸಿಗರು ಅಮೆರಿಕಾದಲ್ಲಿ ನೆಲೆಸಿದ್ದಾರೆ. 2017ರಿಂದೀಚೆಗೆ ಅಮೆರಿಕಾಗೆ ಅಕ್ರಮವಾಗಿ ವಲಸೆ ಹೋಗುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.

2007ರಲ್ಲಿನ 12.2 ದಶಲಕ್ಷ ಅಕ್ರಮ ವಲಸಿಗರಿಗೆ ಹೋಲಿಸಿದರೆ, 2021ರಲ್ಲಿ 10.5 ದಶಲಕ್ಷ ಅಕ್ರಮ ವಲಸಿಗರು ಅಮೆರಿಕಾದಲ್ಲಿ ಅನಧಿಕೃತವಾಗಿ ನೆಲೆಸಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

2021ರಲ್ಲಿ ಅಮೆರಿಕಾದಲ್ಲಿ ಉದ್ಯೋಗ ಮಾಡುತ್ತಿರುವವರ ಪೈಕಿ ಕನಿಷ್ಠ ಪಕ್ಷ ಶೇ. 4.6 ಮಂದಿ ಅಕ್ರಮ ವಲಸಿಗರಾಗಿದ್ದಾರೆ.

ಇದರೊಂದಿಗೆ, 2017-2021ರ ಅವಧಿಯಲ್ಲಿ ಕಾನೂನುಬದ್ಧ ವಲಸೆಯ ಪ್ರಮಾಣವೂ ಏರಿಕೆಯಾಗಿದ್ದು, 8 ದಶಲಕ್ಷಕ್ಕೂ ಹೆಚ್ಚು ವಲಸಿಗರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಒಟ್ಟಾರೆಯಾಗಿ ಅಧಿಕೃತ ವಲಸಿಗರು ಸೇರಿದಂತೆ 2021ರಲ್ಲಿನ ಅಮೆರಿಕಾದಲ್ಲಿನ ಜನಸಂಖ್ಯೆಯ ಪ್ರಮಾಣದಲ್ಲಿ ಶೇ. 14.1 ಮಂದಿ ವಿದೇಶಿ ಮೂಲದ ವ್ಯಕ್ತಿಗಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News