ಮೊಹ್ಸೆನ್ ರೆಝಾಯಿ | Photo Credit : facebook 

ಟೆಹರಾನ್, ಅ. 22: ಈ ಪ್ರದೇಶದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳು ಹಾಗೂ ಆಸ್ತಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುವ ಸಾಮರ್ಥ್ಯವನ್ನು ಇರಾನ್ ಇನ್ನೂ ಕಾಯ್ದುಕೊಂಡಿದೆ ಎಂದು ಇರಾನ್‌ನ ಉನ್ನತ ಭದ್ರತಾ ಅಧಿಕಾರಿ ಜನರಲ್ ಮೊಹ್ಸೆನ್ ರೆಝಾಯಿ ಎಚ್ಚರಿಕೆ ನೀಡಿದ್ದಾರೆ.

‘ಸಂಘರ್ಷ ಮತ್ತೆ ಆರಂಭವಾದರೆ, ನಮ್ಮ ಬಳಿ ಇನ್ನೂ ವಿಶಾಲವಾದ ಯೋಜನೆಯಿದೆ. ಕೇಬಲ್‌ಗಳು, ಡೇಟಾ ಸೆಂಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೌಲಭ್ಯಗಳೂ ದಾಳಿಯ ಗುರಿಯಾಗಬಹುದು. ಇರಾನ್ ವಿರುದ್ಧದ ಯಾವುದೇ ಕ್ರಮಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಾವು ರಾಜತಾಂತ್ರಿಕತೆಗೆ ಆದ್ಯತೆ ನೀಡುತ್ತೇವೆ. ಆದರೆ, ಯುದ್ಧ ಮುಂದುವರಿದರೆ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಅಗತ್ಯವಿರುವ ಎಲ್ಲ ಉಪಕರಣಗಳು ಇರಾನ್ ಬಳಿ ಇವೆ’ ಎಂದು ಅವರು ಎಚ್ಚರಿಸಿದ್ದಾರೆ.

ಇಸ್ರೇಲ್‌ನಲ್ಲಿ ಮತದಾನಕ್ಕೆ ಮುನ್ನ ಬೃಹತ್ ಪ್ರಮಾಣದ ಬಾಂಬ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇರಾನ್‌ನ ಗುಪ್ತಚರ ಮೌಲ್ಯಮಾಪನ ಸೂಚಿಸಿದೆ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇರಾನ್ ವಿರುದ್ಧ ಮತ್ತೊಂದು ಯುದ್ಧ ಆರಂಭವಾದರೆ, ಈ ಪ್ರದೇಶದ ದೇಶಗಳಲ್ಲಿ ಅಮೆರಿಕದ ಪಡೆಗಳ ನಿಯೋಜನೆಯ ಕುರಿತ ಮಾಹಿತಿ ನಮ್ಮ ಬಳಿ ಇರುವುದರಿಂದ, ಅವರ ಸಾವು-ನೋವಿನ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಲಿದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor