ದುಬೈಗಿಂತ ಈಗ ಭಾರತದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗ!
ದಿಲ್ಲಿಯಲ್ಲಿ UAE ಗಿಂತ ಡೀಸೆಲ್ ಬೆಲೆ 28 ರೂ.,ಪೆಟ್ರೋಲ್ ಬೆಲೆ 8 ರೂ. ಕಡಿಮೆ
ಸಾಂದರ್ಭಿಕ ಚಿತ್ರ
ದುಬೈ, ಅ. 22: ಭಾರತದ ಹಲವಾರು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈಗ ದುಬೈಗಿಂತ ಕಡಿಮೆಯಿವೆ. ಇದು ಗಲ್ಫ್ ರಾಷ್ಟ್ರದಲ್ಲಿ ಇಂಧನ ಗಮನಾರ್ಹವಾಗಿ ಅಗ್ಗವಾಗಿದೆ ಎಂಬ ಸಾಮಾನ್ಯ ಗ್ರಹಿಕೆಗೆ ಸವಾಲಾಗಿದೆ.
ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಯುಎಇ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದ ಬಳಿಕ ದುಬೈನಲ್ಲಿ ಇಂಧನ ಬೆಲೆಗಳು ಏರಿಕೆಯಾಗಿಯೇ ಉಳಿದಿವೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಇಂಧನ ದರಗಳ ನಡುವಿನ ವ್ಯತ್ಯಾಸ ಮುನ್ನೆಲೆಗೆ ಬಂದಿದೆ. ವಿಶೇಷವಾಗಿ ಡೀಸೆಲ್ ಬೆಲೆಯಲ್ಲಿ ಈ ವ್ಯತ್ಯಾಸ ಎದ್ದು ಕಾಣುತ್ತದೆ. ದಿಲ್ಲಿಯಲ್ಲಿ ಡೀಸೆಲ್ ಬೆಲೆ ದುಬೈಗಿಂತ ಪ್ರತಿ ಲೀಟರ್ ಗೆ ಸುಮಾರು 28 ರೂ. ಕಡಿಮೆಯಿದೆ. ಪೆಟ್ರೋಲ್ ಬೆಲೆಯೂ ದಿಲ್ಲಿಯಲ್ಲಿ ಸುಮಾರು 8 ರೂ. ಕಡಿಮೆಯಿದೆ.
ಅಕ್ಟೋಬರ್ 22ರಂತೆ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 102.12 ರೂ. ಹಾಗೂ ನೊಯ್ಡಾದಲ್ಲಿ 101.96 ರೂ. ಇದೆ. ಇದಕ್ಕೆ ಹೋಲಿಸಿದರೆ, ದುಬೈನಲ್ಲಿ 'ಸ್ಪೆಷಲ್ 95' ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 4.28 ದಿರ್ಹಮ್ ಇದೆ. ಒಂದು ದಿರ್ಹಮ್ ಗೆ 25.71 ರೂ. ವಿನಿಮಯ ದರದಂತೆ ಇದು ಸುಮಾರು 110.04 ರೂ.ಗೆ ಸಮನಾಗುತ್ತದೆ.
ದುಬೈನಲ್ಲಿ ಕಡಿಮೆ ಬೆಲೆಯ ಪೆಟ್ರೋಲ್ ದರ್ಜೆಯಾಗಿರುವ 'ಇ-ಪ್ಲಸ್ 91' ಬೆಲೆ ಕೂಡ ಪ್ರತಿ ಲೀಟರ್ಗೆ 4.21 ದಿರ್ಹಮ್ ಇದ್ದು, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 108.24 ರೂ. ಆಗುತ್ತದೆ. 'ಪ್ರೀಮಿಯಂ ಸೂಪರ್ 98' ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 4.40 ದಿರ್ಹಮ್ ಇದ್ದು, ಸುಮಾರು 113.12 ರೂ. ಆಗುತ್ತದೆ.
ಭಾರತದ ಪ್ರಮುಖ ನಗರಗಳಲ್ಲಿ ಡೀಸೆಲ್ ಬೆಲೆ ದುಬೈಗಿಂತ ಕಡಿಮೆಯಿದ್ದು, ಈ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗಿದೆ. ಅಕ್ಟೋಬರ್ 22ರ ವಿನಿಮಯ ದರದ ಪ್ರಕಾರ ದುಬೈನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 4.80 ದಿರ್ಹಮ್ (ಸುಮಾರು 123.41 ರೂ.) ಇದೆ. ಇದಕ್ಕೆ ಹೋಲಿಸಿದರೆ, ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 95.20 ರೂ. ಹಾಗೂ ನೊಯ್ಡಾದಲ್ಲಿ 95.44 ರೂ. ಇದೆ. ಇದು ದುಬೈಗಿಂತ ಕ್ರಮವಾಗಿ 28.21 ರೂ. ಮತ್ತು 27.97 ರೂ. ಕಡಿಮೆಯಾಗಿದೆ. ಅಂದರೆ, ದಿಲ್ಲಿಯಲ್ಲಿ ವಾಹನ ಸವಾರರು ದುಬೈಗೆ ಹೋಲಿಸಿದರೆ ಡೀಸೆಲ್ ಗೆ ಸುಮಾರು ಶೇಕಡಾ 23ರಷ್ಟು ಕಡಿಮೆ ಹಣ ಪಾವತಿಸುತ್ತಿದ್ದಾರೆ.
2026ರ ಅಕ್ಟೋಬರ್ ನಲ್ಲಿ ಯುಎಇಯ ಇಂಧನ ದರಗಳಲ್ಲಿ ಗಣನೀಯ ಏರಿಕೆಯಾದ ಬಳಿಕ ಈ ಬೆಲೆ ವ್ಯತ್ಯಾಸ ಕಂಡುಬಂದಿದೆ.