ಹಾರ್ಮುಝ್ ಜಲಸಂಧಿಯ ನಿರ್ವಹಣೆ ಕುರಿತು ಒಮಾನ್ ಜೊತೆ ಮಾತುಕತೆ: ಇರಾನ್

Update: 2026-07-26 22:08 IST

Photo Credit : aljazeera.com

ಟೆಹರಾನ್, ಜು.26: ತೈಲ ಮತ್ತು ಅನಿಲ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾದ ಹಾಗೂ ಎರಡೂ ದೇಶಗಳ ಗಡಿಯನ್ನು ಹಂಚಿಕೊಳ್ಳುವ ಆಯಕಟ್ಟಿನ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯ ನಿರ್ವಹಣೆ ಮತ್ತು ಆ ಪ್ರದೇಶದಲ್ಲಿನ ತಮ್ಮ ಪ್ರಾದೇಶಿಕ ಜಲಮಾರ್ಗಗಳನ್ನು ಮರುಪ್ರಾರಂಭಿಸುವ ಕುರಿತು ಒಮಾನ್ ಜೊತೆ ನಡೆದ ಮಾತುಕತೆಯಲ್ಲಿ ಪ್ರಗತಿಯಾಗಿದೆ ಎಂದು ಇರಾನ್ ರವಿವಾರ ತಿಳಿಸಿದೆ.

ಮಾತುಕತೆಗಾಗಿ ಒಮಾನ್ ಅಧಿಕಾರಿಗಳು ಶುಕ್ರವಾರ ಟೆಹರಾನ್‌ಗೆ ಪ್ರಯಾಣ ಬೆಳೆಸಿದ್ದರು. ವಿಷಯಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದ್ದರೂ, ಒಪ್ಪಂದಕ್ಕೆ ಬರಲು ರಾಜತಾಂತ್ರಿಕತೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಸಿಬಿಎಸ್ ವರದಿ ಹೇಳಿದೆ.

ಸತತ 13 ರಾತ್ರಿಗಳ ಕಾಲ ನಡೆಸುತ್ತಿದ್ದ ಇರಾನ್ ಮೇಲಿನ ಬಾಂಬ್ ದಾಳಿಯನ್ನು ತಡೆಹಿಡಿಯುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ಬೆನ್ನಲ್ಲೇ ಈ ರಾಜತಾಂತ್ರಿಕ ಪ್ರಯತ್ನಗಳಿಗೆ ಚಾಲನೆ ದೊರಕಿದೆ. ಸೂಕ್ಷ್ಮವಾದ ರಾಜತಾಂತ್ರಿಕತೆಗೆ ಅಡಚಣೆಯಾಗದಂತೆ ಅಮೆರಿಕ ಬಾಂಬ್ ದಾಳಿಯನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಮಾನ್-ಇರಾನ್ ಮಾತುಕತೆಗಳನ್ನು ವಾಷಿಂಗ್ಟನ್ ನಿಕಟವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇರಾನ್ ಒಪ್ಪಂದ ಮಾಡಿಕೊಳ್ಳಲು ಇಷ್ಟಪಡುತ್ತದೆ" ಎಂದು ಪುನರುಚ್ಚರಿಸಿದ್ದರು.

ಈ ಮಧ್ಯೆ, ಹಾರ್ಮುಝ್ ಜಲಸಂಧಿಯಲ್ಲಿ ಅನಧಿಕೃತ ಪರ್ಯಾಯ ಹಡಗು ಮಾರ್ಗವನ್ನು ಸ್ಥಾಪಿಸುವ ಮೂಲಕ ಮತ್ತು ಇರಾನ್ ಗೊತ್ತುಪಡಿಸಿದ ಕಾರಿಡಾರ್‌ಗಳಿಂದ ವಾಣಿಜ್ಯ ಹಡಗುಗಳ ದಿಕ್ಕು ತಪ್ಪಿಸುವ ಮೂಲಕ ಅಮೆರಿಕವು ಇರಾನ್-ಅಮೆರಿಕ ತಿಳುವಳಿಕೆ ಒಪ್ಪಂದವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News