ಉಕ್ರೇನ್ ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ: ಇಬ್ಬರು ಭಾರತೀಯರು ನಾಪತ್ತೆ
Photo Credit : theweek
ಕೀವ್, ಜು. 26: ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ನಾಲ್ವರು ಭಾರತೀಯ ಸಿಬ್ಬಂದಿಯಿದ್ದ ಸರಕು ಹಡಗಿನ ಮೇಲೆ ದಾಳಿ ನಡೆದಿದ್ದು, ಇಬ್ಬರು ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಈ ಘಟನೆಯು ಸಂಘರ್ಷ ಪೀಡಿತ ಕಪ್ಪು ಸಮುದ್ರ ಪ್ರದೇಶದಲ್ಲಿ ನಾವಿಕರ ಸುರಕ್ಷತೆಯ ಕುರಿತು ಆತಂಕವನ್ನು ಹೆಚ್ಚಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.
ಶನಿವಾರ (ಜು. 25) ಒಡೆಸ್ಸಾ ಬಂದರಿನಲ್ಲಿ ಎಂವಿ ಎಜಿಎನ್ ರಾಗ್ನರ್ ಎಂಬ ಹಡಗಿನ ಮೇಲೆ ದಾಳಿ ನಡೆದಿದೆ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಹಡಗಿನಲ್ಲಿದ್ದ ನಾಲ್ವರು ಭಾರತೀಯರಲ್ಲಿ ಇಬ್ಬರು ಸುರಕ್ಷಿತರಾಗಿದ್ದು, ಉಳಿದ ಇಬ್ಬರ ಸುಳಿವು ಪತ್ತೆಹಚ್ಚಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ. ನಾಪತ್ತೆಯಾದವರ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ಉಕ್ರೇನ್‌ನಲ್ಲಿ ಕೌನ್ಸಿಲರ್ ನೆರವು ಅಗತ್ಯವಿರುವ ಭಾರತೀಯ ಪ್ರಜೆಗಳಿಗಾಗಿ ತುರ್ತು ಸಂಪರ್ಕ ವಿವರಗಳನ್ನು ಹಂಚಿಕೊಂಡಿದೆ.