ಅಸ್ಸಾಂ ಭೀಕರ ಪ್ರವಾಹ : ಮೃತರ ಸಂಖ್ಯೆ 50ಕ್ಕೆ ಏರಿಕೆ

100ಕ್ಕೂ ಹೆಚ್ಚು ಮಂದಿ ನಾಪತ್ತೆ; ಎಂಟು ಲಕ್ಷ ಜನರು ಸಂಕಷ್ಟದಲ್ಲಿ

Update: 2026-07-23 07:11 IST

Photo: x.com/ndtv

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 31 ಜನರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ 16 ಜಿಲ್ಲೆಗಳ ಸುಮಾರು ಎಂಟು ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ಮುಂಗಾರು ಋತುವಿನಲ್ಲಿ ಮೃತರ ಒಟ್ಟು ಸಂಖ್ಯೆ 50ಕ್ಕೂ ಏರಿಕೆಯಾಗಿದೆ.

ನೆರೆಯ ನಾಗಾಲ್ಯಾಂಡ್ ನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಸ್ಸಾಂನ ಗಡಿಜಿಲ್ಲೆಗಳಾದ ಶಿವಸಾಗರ, ಚರಾಯ್ದೇವ್ ಮತ್ತು ಜೋರ್ಹಾಟ್ ಜಿಲ್ಲೆಗಳು ತೀವ್ರವಾಗಿ ಜಲಾವೃತಗೊಂಡು ಅಪಾರ ಹಾನಿಗೊಳಗಾಗಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಶಿವಸಾಗರ ಜಿಲ್ಲೆಯೊಂದರಲ್ಲೇ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 20 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚರಾಯ್ದೇವ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐದು ಸಾವುಗಳು ವರದಿಯಾಗಿದ್ದರೆ, ಗೋಲಾಘಾಟ್ ನಲ್ಲಿ ಇಬ್ಬರು ಮತ್ತು ಜೋರ್ಹಾಟ್ ನಲ್ಲಿ ಒಬ್ಬ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಪ್ರತಿಕ್ರಿಯಿಸಿ, ಅರುಣಾಚಲ ಪ್ರದೇಶದಲ್ಲಿ ಶೇಕಡಾ 141 ಮತ್ತು ನಾಗಾಲ್ಯಾಂಡ್ ನಲ್ಲಿ ಶೇಕಡಾ 181ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇದರ ಪರಿಣಾಮವಾಗಿ ಅಸ್ಸಾಂಗೆ ಹರಿದುಬಂದ ಪ್ರವಾಹದ ನೀರು, ಇತ್ತೀಚಿನ ಇತಿಹಾಸದಲ್ಲೇ ಎಂದೂ ಪ್ರವಾಹವನ್ನು ಕಾಣದ ಅಥವಾ ತೀರ ಕಡಿಮೆ ಪ್ರವಾಹ ಕಂಡಿದ್ದ ಜಿಲ್ಲೆಗಳನ್ನೂ ಜಲಾವೃತಗೊಳಿಸಿದೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಶಿವಸಾಗರ ಅತ್ಯಂತ ತೀವ್ರ ಪ್ರವಾಹ ಪೀಡಿತ ಜಿಲ್ಲೆಯಾಗಿ ಹೊರಹೊಮ್ಮಿದ್ದು, ಸುಮಾರು 3.6 ಲಕ್ಷ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಶಿವಸಾಗರ ಜಿಲ್ಲೆಯಲ್ಲೇ ಸುಮಾರು 100 ಜನರು ನಾಪತ್ತೆಯಾಗಿರುವ ವರದಿಗಳು ಬಂದಿವೆ. ಜೋರ್ಹಾಟ್ ನಲ್ಲಿ ಸುಮಾರು 88,000 ಹಾಗೂ ಚರಾಯ್ದೇವ್ ನಲ್ಲಿ 72,500ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ವಿಶ್ವನಾಥ್, ಚರಾಯ್ದೇವ್, ಧೇಮಾಜಿ, ದಿಬ್ರೂಗಢ್, ಗೋಲಾಘಾಟ್, ಜೋರ್ಹಾಟ್, ಕಾಮರೂಪ, ಕಾಮರೂಪ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್, ನಾಗಾಂವ್, ಶಿವಸಾಗರ ಮತ್ತು ತಿನ್ಸುಕಿಯಾ ಜಿಲ್ಲೆಗಳಾದ್ಯಂತ 5,64,600 ಜನರು ಪ್ರವಾಹ ಬಾಧಿತರಾಗಿದ್ದಾರೆ.

ರಾಜ್ಯದ 16 ಜಿಲ್ಲೆಗಳ ಸುಮಾರು ಎಂಟು ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ಮುಂಗಾರು ಋತುವಿನಲ್ಲಿ ಮೃತರ ಒಟ್ಟು ಸಂಖ್ಯೆ 50ಕ್ಕೂ ಏರಿಕೆಯಾಗಿದೆ. ಪರಿಹಾರ ಶಿಬಿರಗಳು ಮತ್ತು ಜಲಾವೃತ ಗ್ರಾಮಗಳಿಗೆ ಭೇಟಿ ನೀಡಿದ ಶರ್ಮಾ, ಮೃತರ ಕುಟುಂಬದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದರು.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಪ್ರಸ್ತುತ 10 ಜಿಲ್ಲೆಗಳಲ್ಲಿ 273 ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, 12,284 ನಿರಾಶ್ರಿತರಿಗೆ ಆಶ್ರಯ ನೀಡಿವೆ.

ಭಾರತೀಯ ಸೈನ್ಯ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಅಸ್ಸಾಂ ಪೊಲೀಸ್ ಮತ್ತು ಸಿವಿಲ್ ಆಡಳಿತವು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಚರಾಯ್ದೇವ್, ಗೋಲಾಘಾಟ್, ಜೋರ್ಹಾಟ್ ಮತ್ತು ಶಿವಸಾಗರ ಜಿಲ್ಲೆಗಳಿಂದ 6,000ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News