ಇರಾನ್ ನ ತೈಲ ಘಟಕಗಳ ಮೇಲೆ ದಾಳಿ: ಟೆಹ್ರಾನ್ ನಲ್ಲಿ ಒಬ್ಬರಿಗೆ 20 ಲೀ.ಇಂಧನ ಕೋಟಾ ನಿಗದಿ; ವರದಿ
Photo Credit : aljazeera.com
ಟೆಹ್ರಾನ್: ತೈಲ ಘಟಕಗಳ ಮೇಲೆ ನಡೆದ ದಾಳಿಯ ಪರಿಣಾಮವಾಗಿ ರಾಜಧಾನಿ ಟೆಹ್ರಾನ್ ನಲ್ಲಿ ಇಂಧನ ವಿತರಣೆಗೆ ತಾತ್ಕಾಲಿಕ ನಿಯಂತ್ರಣ ಹೇರಲಾಗಿದೆ. ಇದರ ಭಾಗವಾಗಿ ನಿವಾಸಿಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾವನ್ನು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ವೈಯಕ್ತಿಕ ಇಂಧನ ಕಾರ್ಡ್ ಮೂಲಕ ಪಡೆಯಬಹುದಾದ ಇಂಧನ ಪ್ರಮಾಣವನ್ನು ದಿನಕ್ಕೆ 30 ಲೀಟರ್ ಗಳಿಂದ (7.9 ಗ್ಯಾಲನ್) 20 ಲೀಟರ್ ಗಳಿಗೆ (5.2 ಗ್ಯಾಲನ್) ಇಳಿಸಲಾಗಿದೆ ಎಂದು ಟೆಹ್ರಾನ್ ಗವರ್ನರ್ ಮುಹಮ್ಮದ್ ಸಾದೇಗ್ ಮೊಟಮೆಡಿಯನ್ ತಿಳಿಸಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತೈಲ ಘಟಕಗಳ ಮೇಲೆ ನಡೆದ ದಾಳಿಯಿಂದ ಇಂಧನ ಪೂರೈಕೆಯಲ್ಲಿ ಕೆಲವು ಅಡಚಣೆಗಳು ಉಂಟಾಗಿವೆ ಎಂದು ಅವರು ಹೇಳಿದ್ದಾರೆ.
ಆದರೆ ಈ ಕ್ರಮ ತಾತ್ಕಾಲಿಕವಾಗಿದ್ದು, ಪೂರೈಕೆಯಲ್ಲಿನ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದು ಗವರ್ನರ್ ತಿಳಿಸಿದ್ದಾರೆ. “ಇಂಧನದ ಬಗ್ಗೆ ಸಾರ್ವಜನಿಕರು ಚಿಂತಿಸಬೇಕಿಲ್ಲ. ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ. ನಂತರ ಇಂಧನ ಕೋಟಾ ಕಡಿತ ಕ್ರಮವನ್ನು ಹಿಂಪಡೆಯಲಾಗುತ್ತದೆ” ಎಂದು ಮೊಟಮೆಡಿಯನ್ ಭರವಸೆ ನೀಡಿದ್ದಾರೆ.