×
Ad

ಸಿರಿಯಾದ ದಮಾಸ್ಕಸ್ ಮೇಲೆ ಇಸ್ರೇಲ್ ದಾಳಿ: ಇಬ್ಬರ ಮೃತ್ಯು

Update: 2024-02-21 22:17 IST

Photo: indiatoday.in 

ದಮಾಸ್ಕಸ್: ಸಿರಿಯಾ ರಾಜಧಾನಿ ದಮಾಸ್ಕಸ್‍ನ ಜನವಸತಿ ಪ್ರದೇಶವನ್ನು ಗುರಿಯಾಗಿಸಿ ಬುಧವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸಿರಿಯಾ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ `ಸನಾ' ವರದಿ ಮಾಡಿದೆ.

9 ಅಂತಸ್ತಿನ ಕಟ್ಟಡವನ್ನು ಗುರಿಯಾಗಿಸಿ ನಡೆದ ಶತ್ರುಗಳ ಸರಣಿ ಕ್ಷಿಪಣಿ ದಾಳಿಯಲ್ಲಿ ಕಟ್ಟಡದ 4ನೇ ಅಂತಸ್ತು ತೀವ್ರ ಹಾನಿಗೊಂಡಿದ್ದು ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡದಂತೆ ತಡೆಯುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ಬಳಿಕ ಸಿರಿಯಾದಲ್ಲಿ ಇಸ್ರೇಲ್ ನೂರಾರು ವಾಯುದಾಳಿಗಳನ್ನು ನಡೆಸಿದೆ. ಬುಧವಾರ ನಡೆಸಿದ ದಾಳಿಯಲ್ಲಿ ಸಾವು-ನೋವಿಗೆ ಒಳಗಾದವರಲ್ಲಿ ವಿದೇಶೀಯರೂ ಸೇರಿದ್ದಾರೆ ಎಂದು ಬ್ರಿಟನ್ ಮೂಲದ `ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್' ಹೇಳಿದೆ.

ಬುಧವಾರ ದಾಳಿಗೆ ಗುರಿಯಾದ ದಮಾಸ್ಕಸ್‍ನ ಕಾಫ್ರ್ ಸೌಸಾ ಪ್ರದೇಶವು ಬಿಗಿ ಭದ್ರತೆಯಿಂದ ಕೂಡಿದ್ದು ಇಲ್ಲಿ ಹಿರಿಯ ಭದ್ರತಾ ಅಧಿಕಾರಿಗಳ ಕಚೇರಿ, ಗುಪ್ತಚರ ಕೇಂದ್ರ ಕಚೇರಿ, ಇರಾನ್‍ನ ಸಾಂಸ್ಕೃತಿಕ ಕೇಂದ್ರ ಮುಂತಾದ ಉನ್ನತ ಸಂಸ್ಥೆಗಳಿವೆ.

ಹಮಾಸ್ ಗುಂಪನ್ನು ಬೆಂಬಲಿಸುತ್ತಿರುವ ಇರಾನ್ ಹಾಗೂ ಅದರ ಮಿತ್ರರು ಸಿರಿಯಾ ಹಾಗೂ ಲೆಬನಾನ್‍ನಲ್ಲಿ ಹೊಂದಿರುವ ನೆಲೆಯನ್ನು ಗುರಿಯಾಗಿಸಿ ಮತ್ತಷ್ಟು ದಾಳಿ ನಡೆಸುವುದಾಗಿ ಇಸ್ರೇಲ್ ಈ ಹಿಂದೆ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News