ತುರ್ಕಿಯೆಯಲ್ಲಿ `ನಕಲಿ ಹತ್ಯೆ ಸಂಚಿನ' ಮೂಲಕ ಅಮೆರಿಕ–ಇರಾನ್ ಮಾತುಕತೆ ಹಳಿ ತಪ್ಪಿಸಲು ಇಸ್ರೇಲ್ ಯತ್ನ: ದಿ ವಾಷಿಂಗ್ಟನ್ ಪೋಸ್ಟ್ ವರದಿ
ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್, ಆ. 13: ತುರ್ಕಿಯೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದೆ ಎಂಬ ನಕಲಿ' ಗುಪ್ತಚರ ಮಾಹಿತಿಯನ್ನು ಇಸ್ರೇಲ್ ಅಮೆರಿಕದ CIAಗೆ ನೀಡಿತ್ತು ಎಂದು ಆರೋಪಿಸಲಾಗಿದೆ. ಟ್ರಂಪ್ ಅವರ ಇರಾನ್ ನೀತಿಯ ಮೇಲೆ ಪ್ರಭಾವ ಬೀರಲು ಮತ್ತು ಟ್ರಂಪ್ ಹಾಗೂ ತುರ್ಕಿಯೆ ನಡುವೆ ಬೆಳೆಯುತ್ತಿದ್ದ ಬಾಂಧವ್ಯಕ್ಕೆ ಧಕ್ಕೆ ತರಲು ಇಸ್ರೇಲ್ ಈ ರೀತಿ ಮಾಡಿರುವುದಾಗಿ ಅಮೆರಿಕದ ಅಧಿಕಾರಿಗಳು ಭಾವಿಸಿದ್ದಾರೆ ಎಂದು ʼದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
CIA ಅಧಿಕಾರಿಗಳಿಗೆ ಈ ಗುಪ್ತಚರ ಮಾಹಿತಿ ನಂಬಲರ್ಹವಾಗಿ ಕಾಣಲಿಲ್ಲ ಮತ್ತು ಅವರು ತಮ್ಮ ಅನುಮಾನಗಳನ್ನು ಟ್ರಂಪ್ ಆಡಳಿತದ ಅಧಿಕಾರಿಗಳಿಗೆ ವ್ಯಕ್ತಪಡಿಸಿದರು. ಅಮೆರಿಕದ ಅಧಿಕಾರಿಯೊಬ್ಬರು ಈ ವರದಿಗಳನ್ನು `ಇಸ್ರೇಲ್ ನಿಂದ ಬಂದಿದೆಯೇ ಹೊರತು ಅಮೆರಿಕ ತಯಾರಿಸಿದ್ದಲ್ಲ, ಮತ್ತು ಇದನ್ನು ಕಡಿಮೆ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ' ಎಂದು ಬಣ್ಣಿಸಿದ್ದಾರೆ.
ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ, ಟ್ರಂಪ್ ಅವರ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪ್ರದೇಶದಲ್ಲಿನ ಅಮೆರಿಕದ ನೀತಿಯ ಮೇಲೆ ಪ್ರಭಾವ ಬೀರಲು ಇಸ್ರೇಲ್ ನ ಈ ಎಚ್ಚರಿಕೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕೆಲವು ಅಮೆರಿಕನ್ ಗುಪ್ತಚರ ಅಧಿಕಾರಿಗಳು ನಂಬಿದ್ದಾರೆ.
ಇರಾನ್ ವಿರುದ್ಧದ ಯುದ್ಧವನ್ನು ಮತ್ತೆ ಪ್ರಾರಂಭಿಸಲು ಟ್ರಂಪ್ ಅವರನ್ನು ಪ್ರಚೋದಿಸಲು ಇಸ್ರೇಲ್ ಈ ಬೆದರಿಕೆಯನ್ನು ಹೆಣೆದಿರಬಹುದು ಎಂದು ಅಮೆರಿಕದ ಅಧಿಕಾರಿಗಳು ನಂಬಿದ್ದಾರೆ. ಟ್ರಂಪ್ ಮತ್ತು ಇರಾನ್ ನಡುವಿನ ಮಾತುಕತೆಯನ್ನು ಹಳಿ ತಪ್ಪಿಸಲು ಹಾಗೂ ತುರ್ಕಿಯೆ ಅಮೆರಿಕದಿಂದ F-35 ಫೈಟರ್ ಜೆಟ್ ಗಳನ್ನು ಖರೀದಿಸುವುದನ್ನು ತಡೆಯಲು ಈ ವರದಿಯನ್ನು ಹೆಣೆಯಲಾಗಿದೆ ಎಂದು ತುರ್ಕಿಯೆ ಅಧಿಕಾರಿಗಳು ಸಹ ನಂಬಿದ್ದಾರೆ.
ಟ್ರಂಪ್ ಮತ್ತು ತುರ್ಕಿಯೆ ಅಧ್ಯಕ್ಷ ಎರ್ಡೋಗನ್ ನಡುವಿನ ನಿಕಟ ಬಾಂಧವ್ಯದಿಂದಾಗಿ ಅಮೆರಿಕ ಮತ್ತು ತುರ್ಕಿಯೆ ನಡುವೆ ಬೆಳೆಯುತ್ತಿರುವ ಬಾಂಧವ್ಯದ ಬಗ್ಗೆ ಇಸ್ರೇಲ್ ಕಳವಳ ಹೊಂದಿರುವುದಾಗಿ ವರದಿ ಹೇಳಿದೆ.