×
Ad

ಯುದ್ಧವಿರಾಮಕ್ಕೆ ಇಸ್ರೇಲ್ - ಲೆಬನಾನ್ ಒಪ್ಪಿಗೆ : ಹಿಜ್ಬುಲ್ಲಾ ಮುಕ್ತ ಭದ್ರತಾ ವಲಯ ರಚನೆಗೆ ಸಮ್ಮತಿ

Update: 2026-06-04 22:17 IST
Photo Credit: AP

ವಾಶಿಂಗ್ಟನ್, ಜೂ.4: ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ 4ನೇ ಸುತ್ತಿನ ಮಾತುಕತೆಯ ಬಳಿಕ ಕದನ ವಿರಾಮವನ್ನು ನವೀಕರಿಸಲು ಮತ್ತು ಲೆಬನಾನ್‍ನ ಒಳಗೆ ಹಿಜ್ಬುಲ್ಲಾ ಗುಂಪಿಗೆ ಪ್ರವೇಶವಿಲ್ಲದ ಹಲವಾರು `ಪೈಲಟ್' ಭದ್ರತಾ ವಲಯಗಳನ್ನು ರಚಿಸಲು ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡಿವೆ.

ಅಮೆರಿಕ, ಇಸ್ರೇಲ್, ಲೆಬನಾನ್‍ನ ಜಂಟಿ ಹೇಳಿಕೆಯ ಪ್ರಕಾರ ` ಹಿಜ್ಬುಲ್ಲಾದ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಮತ್ತು ಲಿಟಾನಿ ನದಿಯ ದಕ್ಷಿಣದ ಪ್ರದೇಶಗಳಿಂದ ಹಿಜ್ಬುಲ್ಲಾ ಕಾರ್ಯಕರ್ತರನ್ನು ಸ್ಥಳಾಂತರಿಸುವ ಷರತ್ತನ್ನು ಯುದ್ಧವಿರಾಮವು ಅವಲಂಬಿಸಿದೆ'. ಭದ್ರತಾ ವಲಯಗಳಿಗೆ ಹಿಜ್ಬುಲ್ಲಾ ಪ್ರವೇಶವನ್ನು ನಿಷೇಧಿಸಲಾಗುತ್ತದೆ. ಭದ್ರತಾ ವಲಯಗಳ ಸಂಪೂರ್ಣ ನಿಯಂತ್ರಣವನ್ನು ಲೆಬನಾನ್‍ನ ಸಶಸ್ತ್ರ ಪಡೆ ವಹಿಸಿಕೊಳ್ಳಬೇಕು. ಈ ಕ್ರಮಗಳು ಸಮಗ್ರ ಶಾಂತಿ ಮತ್ತು ಸುರಕ್ಷತಾ ಒಪ್ಪಂದದತ್ತ ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ. ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಬಂಧವನ್ನು ಎರಡು ಸಾರ್ವಭೌಮ ಸರ್ಕಾರಗಳು ನಿರ್ಧರಿಸಬೇಕು. ಲೆಬನಾನ್‍ನ ಭವಿಷ್ಯದ ಬಗ್ಗೆ ಯಾವುದೇ ರಾಷ್ಟ್ರ ಅಥವಾ ರಾಷ್ಟ್ರೇತರ ಗುಂಪುಗಳು ನಿರ್ಧರಿಸುವಂತಿಲ್ಲ' ಎಂದು ಜಂಟಿ ಹೇಳಿಕೆ ತಿಳಿಸಿದೆ.

ಹಿಜ್ಬುಲ್ಲಾವು ರಾಯಭಾರಿಗಳ ಮಟ್ಟದಲ್ಲಿ ನಡೆದ ಮಾತುಕತೆಯ ಭಾಗವಾಗಿಲ್ಲ. ಲೆಬನಾನ್‍ನ ಸಶಸ್ತ್ರ ಪಡೆಗಳಿಗೆ ತನ್ನ ಬೆಂಬಲವನ್ನು ಅಮೆರಿಕ ಪುನರುಚ್ಚರಿಸಿತು ಮತ್ತು ಲೆಬನಾನ್ ತನ್ನ ಪ್ರದೇಶದಾದ್ಯಂತ ಅಧಿಕಾರವನ್ನು ಪ್ರತಿಪಾದಿಸುವ ಸಾಮರ್ಥ್ಯವನ್ನು ಬಲಪಡಿಸಲು ನಿರಂತರ ನೆರವಿನ ವಾಗ್ದಾನ ನೀಡಿದೆ. ಸಮಗ್ರ ಒಪ್ಪಂದವನ್ನು ತಲುಪುವ ಗುರಿಯೊಂದಿಗೆ ಜೂನ್ ಕೊನೆಯ ವಾರದಲ್ಲಿ ಹೊಸ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಕದನ ವಿರಾಮ ಯೋಜನೆಯನ್ನು ತಿರಸ್ಕರಿಸುವುದಾಗಿ ಹಿಜ್ಬುಲ್ಲಾ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News