×
Ad

ಈಜಿಪ್ಟ್–ಅರ್ಜೆಂಟೀನಾ ಪಂದ್ಯಕ್ಕೂ ಮುನ್ನ ಗಾಝಾದ ಮೇಲೆ ಇಸ್ರೇಲ್ ನಿಂದ ದಾಳಿ: ಸಾರ್ವಜನಿಕ ಪ್ರದರ್ಶನದ ಸಂಘಟಕ ಸೇರಿ ನಾಲ್ವರು ಮೃತ್ಯು

Update: 2026-07-08 19:57 IST

Photo Credit : AP 

ಡೈರ್ ಅಲ್-ಬಲಾಹ್, ಜು. 8: ಫಿಫಾ ವಿಶ್ವಕಪ್‌ ನಲ್ಲಿ ಈಜಿಪ್ಟ್–ಅರ್ಜೆಂಟೀನಾ ನಡುವಿನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಗಾಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ, ಫೆಲೆಸ್ತೀನ್‌ ನ ಉನ್ನತ ನೆರವು ಅಧಿಕಾರಿ ಹಾಗೂ ಈ ಪ್ರದೇಶದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಘಟಕರೊಬ್ಬರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಗಾಝಾದಲ್ಲಿನ ಈಜಿಪ್ಟ್ ಸಮಿತಿಯ ಸಾರ್ವಜನಿಕ ಸಂಪರ್ಕ ನಿರ್ದೇಶಕ ಮುಹಮ್ಮದ್ ಅಲ್-ವಹೀದಿ ಎಂದು ಗುರುತಿಸಲಾಗಿದೆ. ಗಾಝಾದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸುವ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಅರಬ್ ರಾಷ್ಟ್ರವಾದ ಈಜಿಪ್ಟ್ ಹಾಲಿ ವಿಶ್ವಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಮಣಿಸಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಸಜ್ಜಾಗುತ್ತಿದ್ದ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಕಳೆದ ಅಕ್ಟೋಬರ್‌ ನಲ್ಲಿ ಶಾಂತಿ ಒಪ್ಪಂದ ಜಾರಿಯಾಗಿದ್ದರೂ ಗಾಝಾದಲ್ಲಿ ಇಸ್ರೇಲ್ ದಾಳಿಗಳು ಮುಂದುವರಿದಿರುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

ಮಂಗಳವಾರ ಸಂಜೆ ಗಾಝಾ ನಗರದ ಸಮೀಪದ ಸಬ್ರಾ ಪ್ರದೇಶದಲ್ಲಿ ಕಾರೊಂದಕ್ಕೆ ಬಾಂಬ್ ಅಪ್ಪಳಿಸಿತು. ಈ ವೇಳೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಹಮ್ಮದ್ ಅಲ್-ವಹೀದಿ, 10 ವರ್ಷದ ಹಮ್ಝಾ ಅಲ್-ದೇರಿ ಹಾಗೂ ಆತನ ಎಂಟು ವರ್ಷದ ಸಹೋದರ ಫಾರಿ ಮೃತಪಟ್ಟರು. ಸ್ಫೋಟದಲ್ಲಿ ಕಾರು ಚಾಲಕ 33 ವರ್ಷದ ಅಹ್ಮದ್ ದಘ್ಮುಶ್ ಕೂಡ ಸಾವಿಗೀಡಾದರು ಎಂದು ವರದಿಯಾಗಿದೆ.

ಶಿಫಾ ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಅಬು ಸೆಲ್ಮಿಯಾ ಅವರು ನಾಲ್ವರ ಮೃತದೇಹಗಳನ್ನು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದಾರೆ.

ಮುಹಮ್ಮದ್ ಅಲ್-ವಹೀದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡೇ ಕಾರ್ಯಾಚರಣೆ ನಡೆಸಲಾಗಿದ್ದು, ಮೃತಪಟ್ಟ ಅಹ್ಮದ್ ದಘ್ಮುಶ್ ಆ ಬಂಡುಕೋರನೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅದು ಸ್ಪಷ್ಟಪಡಿಸಿದೆ.

ಆದರೆ, ಕಾರು ಚಾಲಕ ಅಹ್ಮದ್ ದಘ್ಮುಶ್ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂದು ಮುಹಮ್ಮದ್ ಅಬು ಸೆಲ್ಮಿಯಾ ತಿಳಿಸಿದ್ದಾರೆ.

ಇದೇ ಬೀದಿಯಲ್ಲಿ ಘಟನೆಯ ಸುಮಾರು ಅರ್ಧ ಗಂಟೆ ಮೊದಲು ಇಸ್ರೇಲ್ ಮತ್ತೊಂದು ದಾಳಿ ನಡೆಸಿತ್ತು. ಆದರೆ, ಆ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿರಲಿಲ್ಲ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News