ಇರಾಕ್ ಪ್ರವೇಶಿಸಿದ ಖಾಮಿನೈ ಅವರ ಅಂತ್ಯಸಂಸ್ಕಾರ ಮೆರವಣಿಗೆ
Photo Credit : AP , PTI
ಬಗ್ದಾದ್, ಜು.8: ಇರಾನ್‍ನ ಹತರಾದ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಸಂಸ್ಕಾರ ಮೆರವಣಿಗೆಯು ಬುಧವಾರ ಇರಾಕ್‍ನ ಪವಿತ್ರ ನಗರವಾದ ನಜಾಫ್‍ನಲ್ಲಿ ಸಾಗಿತು. ಸ್ವದೇಶದಲ್ಲಿ ಭಾರಿ ಜನಸ್ತೋಮವನ್ನು ಸೆಳೆದಿದ್ದ ಈ ಆರು ದಿನಗಳ ಅಂತ್ಯಸಂಸ್ಕಾರ ಮೆರವಣಿಗೆಯು ಈಗ ಗಡಿ ದಾಟಿ ಮುಂದುವರಿದಿದೆ.
ಮೃತ ನಾಯಕನ ದೊಡ್ಡ ಭಾವಚಿತ್ರಗಳನ್ನು ಹಿಡಿದ ಜನರು ಮೆರವಣಿಗೆಯ ಮಾರ್ಗದುದ್ದಕ್ಕೂ ಜಮಾಯಿಸಿದ್ದರು. ಖಾಮಿನೈ ಅವರ ಮೃತದೇಹ ಹೊತ್ತ ದೊಡ್ಡ ಟ್ರಕ್ ಬೀದಿಗಳಲ್ಲಿ ಸಾಗುತ್ತಿದ್ದಂತೆ, ಜನರು `ಅಮೆರಿಕಕ್ಕೆ ಧಿಕ್ಕಾರ' ಮತ್ತು `ಇಸ್ರೇಲ್‍ಗೆ ಧಿಕ್ಕಾರ' ಎಂದು ಘೋಷಣೆಗಳನ್ನು ಕೂಗಿದರು.
ಇರಾನ್ ಬೆಂಬಲಿತ ಪ್ರಬಲ ಇರಾಕಿ ಸಶಸ್ತ್ರ ಗುಂಪಿನ ಬೆಂಬಲಿಗರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಅವರ ಬ್ಯಾನರ್‌ಗಳ ಜೊತೆಗೆ ಇರಾಕ್ ಮತ್ತು ಇರಾನ್ ದೇಶಗಳ ಧ್ವಜಗಳು ಸಾರ್ವಜನಿಕರ ನಡುವೆ ಹಾರಾಡುತ್ತಿದ್ದವು. ಅಂತ್ಯಸಂಸ್ಕಾರ ಮೆರವಣಿಗೆಯು ಮಂಗಳವಾರ ಸಂಜೆ ನಜಾಫ್‍ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಇರಾಕ್ ಪ್ರಧಾನಿ ಅಲಿ ಅಲ್-ಜೈದಿ, ಹಿರಿಯ ಅಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರು ಅಧಿಕೃತವಾಗಿ ಅದನ್ನು ಬರಮಾಡಿಕೊಂಡರು.