ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಮುಕ್ತಾಯಗೊಂಡಿದೆ: ಡೊನಾಲ್ಡ್ ಟ್ರಂಪ್
ಇರಾನ್ ನಾಯಕರನ್ನು ʼಅಸ್ವಸ್ಥ ಜನರುʼ ಎಂದ ಅಮೆರಿಕ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo credit: PTI)
ವಾಷಿಂಗ್ಟನ್: ಇರಾನ್‌ನೊಂದಿಗೆ ಸಹಿ ಮಾಡಿದ ಮಧ್ಯಂತರ ಶಾಂತಿ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಇರಾನ್‌ನ ಮೇಲೆ ಹೊಸ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ತುರ್ಕಿಯೆಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ನಾಯಕರನ್ನು ಕೊಳಕು ಮತ್ತು ಅಸ್ವಸ್ಥ ಜನರು ಎಂದು ಕರೆದರು. ಇರಾನ್ ನೊಂದಿಗೆ ಯಾವುದೇ ರೀತಿಯ ಮಾತುಕತೆ ಮುಂದುವರಿಸುವುದಿಲ್ಲ ಎಂದು ಹೇಳಿದರು.
ಇರಾನ್‌ನೊಂದಿಗೆ ಮೂರು ವಾರಗಳ ಹಿಂದೆ ಸಹಿ ಮಾಡಿದ ತಿಳುವಳಿಕೆ ಒಪ್ಪಂದದ ಕುರಿತು ಕೇಳಿದಾಗ ಪ್ರತಿಕ್ರಿಯಿಸಿದ ಟ್ರಂಪ್, ನನ್ನ ಪಾಲಿಗೆ ಆ ಒಪ್ಪಂದ ಮುಕ್ತಾಯವಾಗಿದೆ. ಇನ್ನು ಮುಂದೆ ಇರಾನ್‌ನೊಂದಿಗೆ ಯಾವುದೇ ವ್ಯವಹಾರ ನಡೆಸಲು ನಾನು ಬಯಸುವುದಿಲ್ಲ ಎಂದು ಹೇಳಿದರು.
“ಅವರು ಕೊಳಕು ಮತ್ತು ಅಸ್ವಸ್ಥ ಜನರು, ಅವರು ಕೆಟ್ಟ ಹಾಗೂ ಹಿಂಸಾತ್ಮಕ ಜನರು, ಅವರ ಬಳಿ ಅಣ್ವಸ್ತ್ರಗಳಿದ್ದರೆ ಅದನ್ನು ಖಂಡಿತವಾಗಿಯೂ ಬಳಸುತ್ತಿದ್ದರು" ಎಂದು ಇರಾನ್ ವಿರುದ್ಧ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು. ಉಭಯ ದೇಶಗಳ ಮಾತುಕತೆಯನ್ನು ಪ್ರತಿನಿಧಿಗಳು ಮುಂದುವರಿಸಬಹುದು , ಆದರೆ ಈ ಪ್ರಯತ್ನ "ಸಮಯ ವ್ಯರ್ಥ" ಎಂದು ಟ್ರಂಪ್ ಹೇಳಿದರು.