ಇರಾನಿನ ತೈಲ ಮಾರಾಟಕ್ಕೆ ನೀಡಿದ್ದ ಪರವಾನಗಿ ರದ್ದು: ಅಮೆರಿಕದ ಖಜಾನೆ ಇಲಾಖೆ ಆದೇಶ
ಇರಾನಿನ ತೈಲ ವ್ಯಾಪಾರದ ಮೇಲೆ ಮತ್ತೆ ನಿರ್ಬಂಧ
ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುತ್ತಿರುವ ತೈಲ ಟ್ಯಾಂಕರ್ (ಸಾಂದರ್ಭಿಕ ಚಿತ್ರ). Photo: x.com/AJEnglish
ವಾಷಿಂಗ್ಟನ್, ಜು. 8: ಇರಾನಿನ ತೈಲ ಮಾರಾಟಕ್ಕೆ ಅಧಿಕಾರ ನೀಡಿದ್ದ ಸಾಮಾನ್ಯ ಪರವಾನಗಿಯನ್ನು ಅಮೆರಿಕ ಖಜಾನೆ ಇಲಾಖೆ ರದ್ದುಗೊಳಿಸಿದೆ.
ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಹೊರಡಿಸಿದ ಹೇಳಿಕೆಯ ಪ್ರಕಾರ, ಜೂನ್ 21, 2026ರಂದು ಜಾರಿಗೆ ಬಂದಿದ್ದ ಸಾಮಾನ್ಯ ಪರವಾನಗಿ X ಅನ್ನು ಸಾಮಾನ್ಯ ಪರವಾನಗಿ X1 ಮೂಲಕ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಆದೇಶವು ಜುಲೈ 7, 2026ರಿಂದಲೇ ಜಾರಿಗೆ ಬಂದಿದೆ ಎಂದು ತಿಳಿಸಲಾಗಿದೆ.
ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ನಡೆದಿದ್ದ ಪ್ರೋತ್ಸಾಹಕಾರಿ ಮಾತುಕತೆಗಳ ಬಳಿಕ ಅಮೆರಿಕವು ಇರಾನಿನ ತೈಲ ರಫ್ತಿನ ಮೇಲಿನ ಕೆಲವು ನಿರ್ಬಂಧಗಳನ್ನು ಭಾಗಶಃ ಸಡಿಲಿಸಿತ್ತು. ಅದರ ಭಾಗವಾಗಿ ಅಮೆರಿಕ ಖಜಾನೆ ಇಲಾಖೆ ಜೂನ್ ನಲ್ಲಿ 60 ದಿನಗಳ ವಿನಾಯಿತಿ ಘೋಷಿಸಿತ್ತು. ಇದರ ಅನ್ವಯ ಇರಾನಿನ ತೈಲದ ಉತ್ಪಾದನೆ, ವಿತರಣೆ ಹಾಗೂ ಅಮೆರಿಕಕ್ಕೆ ಮಾರಾಟ ನಡೆಸಲು ಅವಕಾಶ ನೀಡಲಾಗಿತ್ತು.
ಆದರೆ ಈಗ ಆ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಮೂಲಕ ಅಮೆರಿಕವು ಇರಾನಿನ ತೈಲ ವ್ಯಾಪಾರದ ಮೇಲಿನ ನಿರ್ಬಂಧಗಳನ್ನು ಮತ್ತೆ ಕಠಿಣಗೊಳಿಸಿದೆ.
ಇದೇ ವೇಳೆ, ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಕೈಗೊಂಡಿರುವ ಕ್ರಮಗಳು "ಅಮೆರಿಕಕ್ಕೆ ಯಾವುದೇ ರೀತಿಯಲ್ಲೂ ಸ್ವೀಕಾರಾರ್ಹವಲ್ಲ. ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆದಿರುವ ವರದಿಗಳ ಬೆನ್ನಲ್ಲೇ ಅಮೆರಿಕ ಈ ಕ್ರಮ ಕೈಗೊಂಡಿದೆ. ಜಾಗತಿಕ ಇಂಧನ ಪೂರೈಕೆ ಮತ್ತು ತೈಲ ಮಾರುಕಟ್ಟೆಯಲ್ಲಿ ಹಾರ್ಮುಝ್ ಜಲಸಂಧಿಯು ಮಹತ್ವದ ಪಾತ್ರ ವಹಿಸುವುದರಿಂದ ಅಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಅಂತರರಾಷ್ಟ್ರೀಯ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.