×
Ad

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ಆರೋಪ: ಲಾರೆನ್ಸ್ ಬಿಷ್ಣೋಯ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಅಮೆರಿಕ

Update: 2026-07-08 08:22 IST

ಲಾರೆನ್ಸ್ ಬಿಷ್ಣೋಯ್ Photo: x.com/IndiaToday

ವಾಷಿಂಗ್ಟನ್ ಡಿಸಿ: ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಆಪ್ತ ಸಹಚರ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕ ಆರೋಪಪಟ್ಟಿ ಸಲ್ಲಿಸಿದೆ. ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕು ಮೂಡಿಸಿದ್ದ ಈ ಹತ್ಯೆ ಪ್ರಕರಣದ ತನಿಖೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ.

ಎಫ್‌ಬಿಐ ನೇತೃತ್ವದಲ್ಲಿ ನಡೆದ ಆಪರೇಷನ್ ಹಾರ್ಡ್ ಬಾಲ್ ಹೆಸರಿನ ಕಾರ್ಯಾಚರಣೆಯಲ್ಲಿ ಅಮೆರಿಕ, ಕೆನಡಾ ಮತ್ತು ಯುರೋಪ್‌ನಾದ್ಯಂತ ಬಿಷ್ಣೋಯ್ ಗ್ಯಾಂಗ್ಗೆ ಸೇರಿದರೆಂದು ಶಂಕಿಸಲಾದ 24 ಸದಸ್ಯರು ಹಾಗೂ ಸಹಚರರನ್ನು ಬಂಧಿಸಲಾಗಿದ್ದು, ಇದೀಗ ಆರೋಪಪಟ್ಟಿ ಸಲ್ಲಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ನ್ಯಾಯಾಂಗ ಇಲಾಖೆ, ಹಲವು ವರ್ಷಗಳ ತನಿಖೆಯ ಭಾಗವಾಗಿ ಕ್ಯಾಲಿಫೋರ್ನಿಯಾ, ಇಂಡಿಯಾನಾ, ಜಾರ್ಜಿಯಾ, ಕೆನಡಾ ಮತ್ತು ಸ್ಪೇನ್‌ನಲ್ಲಿ 50ಕ್ಕೂ ಹೆಚ್ಚು ಶೋಧ ವಾರಂಟ್‌ಗಳನ್ನು ಜಾರಿಗೊಳಿಸಿ ಶಂಕಿತರನ್ನು ಬಂಧಿಸಲಾಗಿದೆ. ಮೂರು ಪ್ರತ್ಯೇಕ ಫೆಡರಲ್ ಆರೋಪಪಟ್ಟಿಗಳಡಿ ಒಟ್ಟು 37 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ 24 ಮಂದಿ ಬಂಧಿತರಾಗಿದ್ದಾರೆ. ಉಳಿದ 10 ಮಂದಿ ತಲೆಮರೆಸಿಕೊಂಡಿದ್ದಾರೆ. ಭಾರತ ಮೂಲದ ಮೂರು ಸಂಘಟಿತ ಅಪರಾಧ ಗುಂಪುಗಳೂ ಇದರಲ್ಲಿ ಸೇರಿವೆ ಎಂದು ಹೇಳಿದೆ.

ಭಾರತದ ಜೈಲಿನಲ್ಲಿದ್ದುಕೊಂಡೇ ಜಾಗತಿಕ ಅಪರಾಧ ಜಾಲವನ್ನು ಮುನ್ನಡೆಸಿದ ಆರೋಪದಡಿ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಒಂದು ಫೆಡರಲ್ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಆರೋಪಪಟ್ಟಿಯ ಪ್ರಕಾರ, ಬಿಷ್ಣೋಯ್ ಜೈಲಿನಲ್ಲಿದ್ದಾಗ ಅಕ್ರಮವಾಗಿ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು ಹಾಗೂ ಇಂಟರ್ನೆಟ್ ಆಧಾರಿತ ಸಂವಹನ ಸಾಧನಗಳ ಮೂಲಕ ಹಲವು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದನು. ಇದರಲ್ಲಿ ರಾಜಕೀಯ ಹತ್ಯೆಗಳು, ಕೊಲೆಗಳು, ಸುಲಿಗೆ, ಅಪಹರಣ, ಮಾದಕ ವಸ್ತುಗಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ವಿವಿಧ ದೇಶಗಳಲ್ಲಿ ಅಪರಾಧ ಚಟುವಟಿಕೆಗಳು ಸೇರಿವೆ.

ಉತ್ತರ ಅಮೆರಿಕಾದಲ್ಲಿ ಈ ಜಾಲದ ಮುಖ್ಯಸ್ಥನಾಗಿ ಗುರುತಿಸಲ್ಪಟ್ಟಿರುವ ಗೋಲ್ಡಿ ಬ್ರಾರ್ ಹಾಗೂ ಯುರೋಪ್‌ನಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದನೆಂದು ಆರೋಪಿಸಲಾದ ರೋಹಿತ್ ಗೊದರಾ ಅವರ ಹೆಸರನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಹೊರಗೆ ಗ್ಯಾಂಗ್‌ನ ಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿದೆ.

ಆರೋಪಗಳಲ್ಲಿ 2023ರ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೇನಲ್ಲಿ ಪ್ರಮುಖ ರಾಜಕೀಯ ಹಾಗೂ ಧಾರ್ಮಿಕ ನಾಯಕರ ಹತ್ಯೆಯೂ ಸೇರಿದೆ. ಆ ಹತ್ಯೆಗೆ ಬಿಷ್ಣೋಯ್ ಮತ್ತು ಬ್ರಾರ್ ಆದೇಶ ನೀಡಿದ್ದರು ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.

ಎಫ್‌ಬಿಐ, ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ, ಕೆನಡಾದ ರಾಯಲ್ ಕೆನೇಡಿಯನ್ ಮೌಂಟೆಡ್ ಪೊಲೀಸ್, ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ ಹಾಗೂ ಉತ್ತರ ಅಮೆರಿಕಾ ಮತ್ತು ಯುರೋಪಿನ ಹಲವು ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ಈ ತನಿಖೆ ನಡೆಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News