ಜಪಾನ್ | ಭಾರಿ ಮಳೆಗೆ ಪ್ರವಾಹ : 4 ಮಂದಿ ಮೃತ್ಯು, ರಸ್ತೆ-ರೈಲು ಸೇವೆಗಳು ಅಸ್ತವ್ಯಸ್ತ
ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ 7,000 ಮಂದಿ
ಸಾಂದರ್ಭಿಕ ಚಿತ್ರ | Photo credit : AI chatgpt
ಟೋಕಿಯೊ: ಪೂರ್ವ ಜಪಾನ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ನರಿಟಾ ವಿಮಾನ ನಿಲ್ದಾಣದಲ್ಲಿ ರಾತ್ರಿಯಿಡೀ ಸುಮಾರು 7,000 ಮಂದಿ ಸಿಲುಕಿಕೊಂಡಿದ್ದು, ರಸ್ತೆ ಹಾಗೂ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜಲಾವೃತಗೊಂಡ ರಸ್ತೆಯಲ್ಲಿ ತೇಲುತ್ತಿದ್ದ 60 ಅಥವಾ 70ರ ಹರೆಯದ ವ್ಯಕ್ತಿ ಹಾಗೂ ನೀರಿನಲ್ಲಿ ಮುಳುಗಿದ್ದ ಕಾರಿನಲ್ಲಿ ಸಿಲುಕಿದ್ದ 66 ವರ್ಷದ ಮಹಿಳೆ ಮೃತಪಟ್ಟವರಲ್ಲಿ ಸೇರಿದ್ದಾರೆ. ಮೂರನೇ ಸಂತ್ರಸ್ತ ರಸ್ತೆ ಬದಿಯಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಲ್ಕನೇ ಸಂತ್ರಸ್ತನ ಗುರುತು ಹಾಗೂ ವಯಸ್ಸು ಇನ್ನೂ ತಿಳಿದುಬಂದಿಲ್ಲ ಎಂದು ಚಿಬಾ ಪ್ರಾಂತ್ಯದ ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ.
ಇನ್ನೊಬ್ಬ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಚಿಬಾ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಭಾರಿ ಮಳೆಯ ಮುನ್ಸೂಚನೆಯನ್ನು ಜಪಾನ್ ಹವಾಮಾನ ಸಂಸ್ಥೆ ಗುರುವಾರ ನೀಡಿತ್ತು. ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿಬಾದಾದ್ಯಂತ ಭೂಕುಸಿತದ ಎಚ್ಚರಿಕೆಗಳು ಹಾಗೂ ವ್ಯಾಪಕ ವಿದ್ಯುತ್ ಕಡಿತ ಉಂಟಾಗಿದೆ.
ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, ಶುಕ್ರವಾರ ಬೆಳಗಿನ ಜಾವದ ವೇಳೆಗೆ ಚಿಬಾ ಪ್ರಾಂತ್ಯದಾದ್ಯಂತ ಸುಮಾರು 26,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಚಿಕಾವಾ, ಕಾಶಿವಾ ಮತ್ತು ಸಕುರಾ ಸೇರಿದಂತೆ ನಗರಗಳಲ್ಲಿ 45 ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಮತ್ತೊಂದು 39 ಮನೆಗಳಲ್ಲಿ ನೆಲದಡಿಯಿಂದ ನೀರು ಒಸರುತ್ತಿರುವುದು ವರದಿಯಾಗಿದೆ.
ಟೋಕಿಯೊಗೆ ಸೇವೆ ಒದಗಿಸುವ ಎರಡು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ನರಿಟಾ ವಿಮಾನ ನಿಲ್ದಾಣದಲ್ಲೂ ಮಳೆಯಿಂದಾಗಿ ಭಾರಿ ಅಸ್ತವ್ಯಸ್ತತೆ ಉಂಟಾಗಿದೆ. ಸುಮಾರು 7,000 ಪ್ರಯಾಣಿಕರು ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದರು.
ವಿಮಾನ ನಿಲ್ದಾಣವನ್ನು ಮಧ್ಯ ಟೋಕಿಯೊಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳು ಸೇರಿದಂತೆ ಚಿಬಾದಾದ್ಯಂತ ಹಲವು ಪ್ರಮುಖ ಹೆದ್ದಾರಿಗಳನ್ನು ಶುಕ್ರವಾರ ಮುಚ್ಚಲಾಗಿತ್ತು. ಇದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿ ಬಂದಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.
ಇದರ ಜೊತೆಗೆ, ಶುಕ್ರವಾರ ಬೆಳಿಗ್ಗೆ ಹಲವು ರೈಲು ಸೇವೆಗಳನ್ನೂ ಸ್ಥಗಿತಗೊಳಿಸಲಾಯಿತು. ಇದರಿಂದ ಪ್ರದೇಶದಾದ್ಯಂತ ಪ್ರಯಾಣಿಕರಿಗೆ ಮತ್ತಷ್ಟು ತೊಂದರೆ ಎದುರಾಯಿತು.
ಭಾರಿ ಮಳೆಗೆ ಸಂಬಂಧಿಸಿದ ಲೆವೆಲ್-5 ಎಚ್ಚರಿಕೆಯನ್ನು ಶುಕ್ರವಾರ ಬೆಳಗಿನ ಜಾವ ಲೆವೆಲ್-4ಕ್ಕೆ ಇಳಿಸಲಾಯಿತು.