ವಿಶ್ವಸಂಸ್ಥೆ ಮೆಟ್ಟಿಲೇರಿದ ಇಮ್ರಾನ್ ಖಾನ್ ಪರ ವಕೀಲರು
ಇಮ್ರಾನ್ ಖಾನ್ | Photo Credit : PTI
ಲಾಹೋರ್, ಆ.22: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವೈದ್ಯಕೀಯ ಆರೈಕೆಗೆ ಸಂಬಂಧಿಸಿದಂತೆ ದೇಶದ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿ, ಕಸ್ಟಡಿಯಲ್ಲಿರುವ ಅವರ ಆರೋಗ್ಯ ರಕ್ಷಣೆಗೆ ತಕ್ಷಣದ ಮಧ್ಯಪ್ರವೇಶ ಕೋರಿ ಅವರ ಪರ ವಕೀಲರು ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಇಮ್ರಾನ್ ಅವರನ್ನು ಶಿಫಾ ಆಸ್ಪತ್ರೆಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದರೂ, ಅವರನ್ನು ಇಸ್ಲಾಮಾಬಾದ್‍ನ ಪಾಕಿಸ್ತಾನ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಪಿಐಎಂಎಸ್)ಗೆ ಕರೆದೊಯ್ಯಲಾಗಿದೆ. ಖಾನ್ ಅವರ ಕಣ್ಣಿನ ತಪಾಸಣೆಯಲ್ಲಿ ಶಿಫಾ ಆಸ್ಪತ್ರೆಯ ಇಬ್ಬರು ತಜ್ಞರು ಭಾಗವಹಿಸಿದ್ದರು, ಉಳಿದ ತಪಾಸಣೆಗಳನ್ನು ಪಿಐಎಂಎಸ್‍ನ ತಜ್ಞರು ನಡೆಸಿದರು. ತದ ನಂತರ ಪಿಐಎಂಎಸ್‍ನ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿಯು ಅವರ ವೈದ್ಯಕೀಯ ಫಿಟ್‍ನೆಸ್ ವರದಿಯನ್ನು ಸಿದ್ಧಪಡಿಸಿತು ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಫಾ ಆಸ್ಪತ್ರೆಯ ಹೊರಗೆ ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರು ಜಮಾಯಿಸಿದ್ದರಿಂದ ಭದ್ರತಾ ಕಾರಣಗಳಿಗಾಗಿ ಮಾಜಿ ಪ್ರಧಾನಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷೆಯ ನಂತರ ಮಾಜಿ ಪ್ರಧಾನಿ ಉತ್ತಮ ಆರೋಗ್ಯದಿಂದಿರುವುದು ಕಂಡುಬಂದಿದೆ ಎಂದು ಪಾಕಿಸ್ತಾನ ಸರಕಾರ ತಿಳಿಸಿದೆ.