ಅಮೆರಿಕದ ನಿರ್ಬಂಧಗಳು ಎಲ್ಲ ಸ್ವತಂತ್ರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಬೆದರಿಕೆ: ಇರಾನ್
Photo Credit : AP
ಟೆಹರಾನ್, ಆ.22: ಇರಾನ್ ವಿರುದ್ಧದ ಅಮೆರಿಕದ ಹೊಸ ನಿರ್ಬಂಧಗಳು ಕೇವಲ ಇರಾನ್ ಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ಎಲ್ಲಾ ಸ್ವತಂತ್ರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವಂತಿವೆ ಎಂದು ಇರಾನ್ ಎಚ್ಚರಿಸಿದೆ. ಇದು ಸಂಪೂರ್ಣ ಸಾಮ್ರಾಜ್ಯಶಾಹಿಯತ್ತ ಮರಳುವ ಸ್ಪಷ್ಟ ಯತ್ನವಾಗಿದೆ ಎಂದು ಟೀಕಿಸಿದೆ.
ಈ ಕ್ರಮಗಳು ಒಂದೇ ದೇಶದ ವಿರುದ್ಧದ ಆರ್ಥಿಕ ಯುದ್ಧವಲ್ಲ. ಅಮೆರಿಕವು ಇತರ ಸ್ವತಂತ್ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಲು ಮಾಡುತ್ತಿರುವ ಪ್ರಯತ್ನವನ್ನು ಇವು ಪ್ರತಿನಿಧಿಸುತ್ತವೆ. ಇತರ ದೇಶಗಳ ಸರಕಾರಗಳು, ಬ್ಯಾಂಕುಗಳು, ಉದ್ಯಮಗಳು ಮತ್ತು ವಿಮಾನ ನಿಲ್ದಾಣಗಳು ಇರಾನ್ ನೊಂದಿಗೆ ಹೇಗೆ ವ್ಯಾಪಾರ ನಡೆಸಬೇಕು ಎಂಬುದನ್ನು ಅಮೆರಿಕ ನಿರ್ದೇಶಿಸಲು ಯತ್ನಿಸುತ್ತಿದೆ ಎಂದು ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯೀ ಹೇಳಿದ್ದಾರೆ.
ತಮ್ಮ ಸ್ವಂತ ಸಾರ್ವಭೌಮತ್ವದ ಪ್ರತ್ಯೇಕ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಬ್ಯಾಂಕುಗಳು, ಉದ್ಯಮಗಳು ಅಥವಾ ವಿಮಾನ ನಿಲ್ದಾಣಗಳನ್ನು ಮೂರನೇ ದೇಶದೊಂದಿಗೆ ಕಾನೂನುಬದ್ಧ ವ್ಯಾಪಾರದಲ್ಲಿ ತೊಡಗದಂತೆ ತಡೆಯಲು ಯಾವುದೇ ಸರಕಾರಕ್ಕೆ ಹಕ್ಕಿಲ್ಲ. ಇಂತಹ ಒತ್ತಡಕ್ಕೆ ಮಣಿಯುವ ದೇಶಗಳು ತಮ್ಮದೇ ಆರ್ಥಿಕ ಮತ್ತು ರಾಜಕೀಯ ನಿರ್ಧಾರಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇತರ ಸಾರ್ವಭೌಮ ದೇಶಗಳಲ್ಲಿನ ಸಂಸ್ಥೆಗಳ ಮೇಲೆ ಒಂದು ದೇಶವು ವಿಧಿಸುವ ದ್ವಿತೀಯ ಹಂತದ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ. ಇವು ವಿಶ್ವಸಂಸ್ಥೆಯ ಚಾರ್ಟರ್ನ ಲೇಖನ 2, ಪ್ಯಾರಾಗ್ರಾಫ್ 1ರಲ್ಲಿ ಪ್ರತಿಪಾದಿಸಲಾದ ಸಾರ್ವಭೌಮ ಸಮಾನತೆಯ ಮೂಲಭೂತ ತತ್ವವನ್ನು ಉಲ್ಲಂಘಿಸುತ್ತವೆ. ಆರ್ಥಿಕ ಪೀಡನೆಯು ಅಂತರರಾಷ್ಟ್ರೀಯ ಅಪರಾಧ ಮತ್ತು ತಪ್ಪು ಕೃತ್ಯವಾಗಿದೆ ಹಾಗೂ ನೌಕಾ ದಿಗ್ಬಂಧನದ ಜೊತೆಗೆ ನಿರ್ಬಂಧಗಳ ಬಳಕೆಯು ಇತರ ದೇಶಗಳ ಸಾರ್ವಭೌಮತ್ವಕ್ಕೆ ಮತ್ತಷ್ಟು ಬೆದರಿಕೆಯನ್ನುಂಟು ಮಾಡುತ್ತದೆ ಎಂದು ಬಗಾಯೀ ಹೇಳಿದ್ದಾರೆ.